ವಿಜಯವಾಣಿ ಸುದ್ದಿಜಾಲ ಹೆಬ್ರಿ
ಧರ್ಮ, ಅರ್ಥ ಹಾಗೂ ಕಾಮ ನಿಯಂತ್ರಣದಲ್ಲಿಟ್ಟುಕೊಂಡವರಿಗೆ ಮೋಕ್ಷ ಲಭಿಸುತ್ತದೆ. ಪರರ ಒಳಿತು ಬಯಸಿ ಲೋಕಕಲ್ಯಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡವರ ಬದುಕು ಸಾರ್ಥಕವಾಗುತ್ತದೆ ಎಂದು ಉಡುಪಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ ಅದಮಾರು ಮಠದ ವತಿಯಿಂದ ಶಾಂತಿನಿಕೇತನ ಯುವವೃಂದದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೌಲ್ಯಯುತ ಸಂಸ್ಕಾರ ಶಿಕ್ಷಣ ವಿಶೇಷ ತರಬೇತಿ ಶಿಬಿರ ಸಮಾರೋಪದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಶಿಬಿರದಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾಡುವ ಕಾರ್ಯದಲ್ಲಿ ನಂಬಿಕೆ ಇಟ್ಟರೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ವಿದ್ಯೆಯನ್ನು ಹಣ ಸಂಪಾದನೆಗೆ ಮಾನದಂಡವಾಗಿಡಬಾರದು. ನಿತ್ಯ ಜಪದ ಜತೆಗೆ ಒಳ್ಳೆಯ ಯೋಚನೆಗಳಿಗೆ ಸಮಯ ವ್ಯಯಿಸಬೇಕು ಎಂದರು.
ಶಾಂತಿನಿಕೇತನದ ಸಂಸ್ಥಾಪಕ ರಾಜೇಶ್ ಕುಡಿಬೈಲ್ ಮಾತನಾಡಿ, ಶಿಬಿರದ ಕಾರಣದಿಂದ ಮಕ್ಕಳಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಇಂತಹ ಸಾರ್ಥಕ ಕಾರ್ಯಕ್ರಮಗಳನ್ನು ಶ್ರೀಗಳು ಆಯೋಜಿಸಿದ್ದು ಅತ್ಯುತ್ತಮ ಕಾರ್ಯ. ಗ್ರಾಮಗಳಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಮುಂದಿನ ದಿನದಲ್ಲಿ ವಿಶೇಷ ಯೋಜನೆ ರೂಪಿಸುತ್ತೇವೆ ಎಂದರು.
ವಿದ್ವಾಂಸರಾದ ಮಂಜುನಾಥ್ ಜೋಯಿಸ್, ನಾರಾಯಣ ಪೂಜಾರ್, ಶಿಬಿರದ ಸಂಯೋಜಕ ಓಂಪ್ರಕಾಶ್ ಭಟ್, ಶಾಂತಿನಿಕೇತನ ಸಂಸ್ಥಾಪಕ ರಾಜೇಶ್ ಕುಡಿಬೈಲ್, ಉಪನ್ಯಾಸಕ ವಾಸುದೇವ, ದೀಕ್ಷಿತ್ ನಾಯಕ್, ರಾಜಶ್ರೀ, ಕಲಾವತಿ ಆರ್., ನಾಗರಾಜ್ ಇದ್ದರು. ಓಂಪ್ರಕಾಶ್ ಭಟ್ ದಂಪತಿ, ಗೋವಿಂದ್‌ರಾಜ್ ದಂಪತಿ, ಗುರುಪ್ರಸಾದ್, ಸರೋಜಾ ರಾವ್, ಲಲಿತಾ, ಪುರುಷೋತ್ತಮ ಅದ್ವೆ, ಲೋಕೇಶ್, ವೆಂಕಟೇಶ್ ರಾವ್, ಮಾಲತಿ ಅವರನ್ನು ಗೌರವಿಸಲಾಯಿತು. ಓಂಪ್ರಕಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಅದಮಾರು ಮಠದ ವತಿಯಿಂದ ಆಯೋಜಿಸಿದ ಶಿಬಿರ ಅತ್ಯಂತ ಪರಿಣಾಮಕಾರಿಯಾಗಿದೆ. ರಂಗೋಲಿ, ಭಜನೆ, ಹೂಕಟ್ಟುವುದು, ಯೋಗ, ನೈತಿಕ ಮೌಲ್ಯಗಳ ಬಗ್ಗೆ ಶಿಬಿರದಲ್ಲಿ ಅರಿವು ಮೂಡಿಸಿದ್ದಾರೆ. ಮತ್ತೊಮ್ಮೆ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು.-ಸೌಜನ್ಯಾ, ಶಿಬಿರಾರ್ಥಿ https://www.vijayavani.net/pedestrian-dies-in-car-collision