ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಶ್ರೀ ಕಲ್ಮಠದಲ್ಲಿ ಆಯೋಜಿಸಿದ್ದ ತಿಂಗಳ ಸಂಗಮ ಮಾಸಿಕ ಕಾರ್ಯಕ್ರಮದಲ್ಲಿ ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯರು ಗೌರವಾಭಿನಂದನೆ ಸ್ವೀಕರಿಸಿದರು. ರವೀಂದ್ರ ಉಪ್ಪಾರ, ಮಲ್ಲಯ್ಯ ದೇವನಾಳಮಠ, ರಾಚಣ್ಣ ತಿಮ್ಮನ್ನವರ, ಈರಪ್ಪ ದಿವಾನದ ಮತ್ತಿತರರಿದ್ದರು. 
ಜಿಲ್ಲೆ

ಮನೆಯಲ್ಲಿನ ಸಂಸ್ಕಾರ ನೈತಿಕ ಮೌಲ್ಯ ಹೆಚ್ಚಿಸುತ್ತದೆ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ತಂದೆ-ತಾಯಿಗಳು ಮಕ್ಕಳಿಗೆ ಮನೆಯಲ್ಲೇ ಸಂಸ್ಕಾರ ಕೊಟ್ಟರೆ ಅವರು ಜೀವನ ಪರ್ಯಂತ ಸಂತೋಷ, ನೆಮ್ಮದಿಯಾಗಿ ಇರಬಹುದು. ವಿದ್ಯೆ ಜತೆಗೆ ನೈತಿಕ ಮೌಲ್ಯಗಳ ಕುರಿತು ಅರಿವು ಮೂಡಿಸಬೇಕೆಂದು ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಹಲಗಲಿ ಗ್ರಾಮದ ಶ್ರೀ ಕಲ್ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಿಂಗಳ ಸಂಗಮ ಮಾಸಿಕ ಕಾರ್ಯಕ್ರಮದಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಮೊದಲು ತಂದೆ-ತಾಯಿಗಳಲ್ಲಿ ಸಂಸ್ಕಾರ ಇರಬೇಕಾಗುತ್ತದೆ ಎಂದರು.

ಶ್ರೀಮಠದ ಗುರುಪಾದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಪಾಲಕರು ಮಕ್ಕಳಿಗೆ ಕೊಟ್ಟ ಸಂಸ್ಕಾರವೇ ಅವರ ವ್ಯಕ್ತಿತ್ವ ಕಾಪಾಡುತ್ತದೆ. ಮನುಷ್ಯನ ನಡೆ-ನುಡಿ ಚೆನ್ನಾಗಿದ್ದರೆ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.

ಜಿಲ್ಲಾ ಕಜಾಪ ಅಧ್ಯಕ್ಷ ಡಿ. ಎಂ. ಸಾವಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಯಿ ಮಗುವಿಗೆ ಪ್ರೀತಿ ಕೊಟ್ಟರೆ ತಂದೆ ಪ್ರೀತಿ ಜತೆಗೆ ಶಿಸ್ತನ್ನು ಕಲಿಸಿ ಕೊಡುವನು. ಪಾಲಕರು ಮಕ್ಕಳಿಗೆ ಶಿಸ್ತನ್ನು ಕಲಿಸುವ ಜತೆಗೆ ಸಮಯದ ಮಹತ್ವ ಕಲಿಸಿ ಕೊಡೋಣ ಎಂದರು.

ವಿದ್ಯೆ ಪಡೆದವನು ಭ್ರಷ್ಟನಾಗಬಹುದು. ಆದರೆ ಸಂಸ್ಕಾರ ಪಡೆದವ ಎಂದೂ ಭ್ರಷ್ಟನಾಗಲಾರ. ಸಂಸ್ಕಾರದ ಕೊರತೆಯಿಂದ ಉನ್ನತ ಶಿಕ್ಷಣ ಪಡೆದುಕೊಂಡವರೆ ದೇಶ ದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ವಿಷಾದಿಸಿದರು.

ಬೀಳಗಿ ತಾಲೂಕು ಕಜಾಪ ಅಧ್ಯಕ್ಷ ಬಸವರಾಜ ದಾವಣಗೆರೆ ಮಾತನಾಡಿದರು. ಮುಖ್ಯಶಿಕ್ಷಕ ರವೀಂದ್ರ ಉಪ್ಪಾರ, ಮಲ್ಲಯ್ಯ ದೇವನಾಳಮಠ, ರಾಚಣ್ಣ ತಿಮ್ಮನ್ನವರ, ಈರಪ್ಪ ದಿವಾನದ, ಗಿರೀಶ ಕುಸುಗಲ್, ಸುರೇಶ ಹೊಸಮನಿ, ಅಶೋಕ ಕೋಮಾರ, ಹೊಳಬಸಯ್ಯ ಮಠಪತಿ ಮತ್ತಿತರಿದ್ದರು.