ವಿಜಯವಾಣಿ ಸುದಿಜಾಲ ನೆಲಮಂಗಲ
ಗ್ರಾಮೀಣ ಭಾಗದ ಜನರಿಂದ ಹುಟ್ಟಿದ ಜಾನಪದ ಕಲೆಗಳು ಮುಂದೆಯೂ ಪ್ರತಿಯೊಬ್ಬರ ಮನೆಮನ ತಲುಪುವಂತಾಗಬೇಕು ಎಂದು ಸಾಹಿತಿ ಬಿದಲೂರು ಸೋಮಣ್ಣ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಣ್ಣಿ ಕಲ್ಚರಲ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಣ್ಣಿ ಸಾಂಸ್ಕೃತಿಕ ಉತ್ಸವ-2023 ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕತೆ ಜತೆಗೆ ತಂತ್ರಜ್ಞಾನದ ಬೆಳವಣಿಗೆ ಹೆಚ್ಚಾದಂತೆ ಜಾನಪದ ಕಲೆಗಳು, ಗ್ರಾಮೀಣ ವೈಭವಗಳು ಕಡಿಮೆಯಾಗುತ್ತಿವೆ. ಕಲೆ ಉಳಿಸಿ, ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಕೆಲ ಸಂಘ-ಸಂಸ್ಥೆಗಳನ್ನು ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ಜಾನಪದ ಎಂಬುದು ಗ್ರಾಮೀಣ ಸೊಗಡಿನ ಕಲೆಯಾಗಿದ್ದು, ಅದನ್ನು ಆನಂದಿಸಿ, ಗೌರವಿಸುವ ಗುಣವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಜಾನಪದ ಸಂಶೋಧಕ ಡಾ.ನಾಗೇಶ್ ಮಾತನಾಡಿ, ಜನರು ಮರೆಯುತ್ತಿರುವ ಕಲೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರೇತ ಸಂಘ ಸಂಸ್ಥೆಗಳು ಶ್ರಮಿಸುತ್ತಿರುವುದು ಮಾದರಿ ಕಾರ್ಯ. ಹಳ್ಳಿಗಳಲ್ಲಿ ಈ ಹಿಂದೆ ಪೌರಾಣಿಕ ನಾಟಕಗಳ ಮೂಲಕ ರೈತರು ಆಯಾಸ ಮರೆಯುತ್ತಿದ್ದರು. ಹಾಗೆಯೇ ನಾಟಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಿನಿಮಿಮಾ ರಂಗದಲ್ಲಿ ಸಾಕಷ್ಟು ಮಂದಿ ಗುರುತಿಸಿಕೊಂಡಿದ್ದಾರೆ. ಮುಂದಿನ ಪೀಳಿಗೆಯ ಯುವಕ ಯುವತಿಯರಿಗೆ ಜಾನಪದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದರು.
ರಂಗ ಶಿಕ್ಷಣ ಕೇಂದ್ರ ಎಂಬ ಬೃಹತ್ ಮರದ ಒಂದು ಚಿಕ್ಕ ರಂಬೆಯಾಗಿ ತಾಲೂಕಿನಾದ್ಯಂತ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಪ್ರಗತಿಗೆ ಟ್ರಸ್ಟ್ ಶ್ರಮಿಸುತ್ತಿದೆ. ಹತ್ತಾರು ವರ್ಷಗಳಿಂದ ಟ್ರಸ್ಟ್ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ದೊಡ್ಡೇರಿ ಬೈಲಪ್ಪ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಖಾತ್ಯ ಗಾಯ ಸಿ.ಎಚ್.ಸಿದ್ದಯ್ಯ ತಂ ಸುಗಮ ಸಂಗೀತ, ಗಾಯಕ ಡಾ.ನಾಗೇಶ್ ತಂಡ ಜಾನಪದ ಗೀತೆ ಗಾಯನ, ಗಂಗಹನುಮಕ್ಕ ತಂಡ ಸೋಬಾನೆ ಪದ, ಗಾಯಕಿ ತ್ರಿವೇಣಿ ತಂಡ ಭಕ್ತಿಗೀತೆ, ಪವನ್ ಮತ್ತು ತಂಡ ದೊಳ್ಳುಕುಣಿತ, ಸರಸ್ವತಿ ತಂಡ ಜಾನಪದ ನೃತ್ಯ, ಪವನ್‌ಕುಮಾರ್ ತಂಡ ಭಜನೆ, ಚೇತನ್‌ಕುಮಾರ್ ತಂಡ ಚೌಡಿಕೆ ಪದ, ನವೀನ್ ತಂಡ ಜಂಬೆವಾದನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾಧಕರಿಗೆ ಸನ್ಮಾನ: ನಗರದ ಗಣೇಶನಗುಡಿಯ ವೀಣೆ ತಯಾರಕ ಕೆ.ತಿಮ್ಮರಾಯಪ್ಪ, ಹರಿಕಥಾ ವಿದ್ವಾನ್ ಬೈಲಹನುಮಂತರಾಯಪ್ಪ, ಕಲಾವಿದ ಬೈಲಾಂಜಿನಪ್ಪ ಅವರನ್ನು ಗೌರವಿಸಲಾಯಿತು.
ಸಾಹಿತಿ ಶಿವಲಿಂಗಯ್ಯ, ಕಲ್ಯಾಣಿನಾಗರಾಜು, ವೈ.ಆನಂದ್, ಕಾರ್ಯನಿತರ ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ಆರ್.ಅಭಿಷೇಕ್, ಮುಖಂಡ ರಾಮಕೃಷ್ಣಯ್ಯ ಮತ್ತಿತರರಿದ್ದರು.