ಜಿಲ್ಲೆ

ಮಿಮ್ಸ್‌ನಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಶ್ಲಾಘನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ವೈದ್ಯರು ಹಗಲು ರಾತ್ರಿ ಎನ್ನದೇ ಸೇವೆ ನೀಡಿ ಜನರ ಮನ್ನಣೆಗಳಿಸಿದ್ದಾರೆ. ಅಂತೆಯೇ ಅಲ್ಲಿನ ಆಡಳಿತದಲ್ಲಿ ಸೇವೆ ಸಲ್ಲಿಸಿರುವ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಸಮಾಜ ಕಲ್ಯಾಣಾಧಿಕಾರಿಯೂ ಆದ ಪಿಆರ್‌ಎಸ್ ಉಮೇಶ್ ಕೂಡ ಒಬ್ಬರು. ಕಷ್ಟವೆಂದು ಆಸ್ಪತ್ರೆಗೆ ಬರುತ್ತಿದ್ದವರಿಗೆ ಕೂಡಲೇ ಸ್ಪಂದಿಸುತ್ತಿದ್ದರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರದ ರೈತ ಸಭಾಂಗಣ ಆವರಣದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ಸಮಾರಂಭದಲ್ಲಿ ವಯೋನಿವೃತ್ತಿ ಹೊಂದಿದ ಉಮೇಶ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಜಿಲ್ಲಾಸ್ಪತ್ರೆ ಅಥವಾ ಮೆಡಿಕಲ್ ಕಾಲೇಜು ಎಂದರೆ ಅಲ್ಲಿ ಜನರಿಗೆ ಚಿಕಿತ್ಸೆ ಉತ್ತಮವಾಗಿ ಸಿಗುತ್ತಿರುತ್ತದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮಾತನಾಡಿ, ಉಮೇಶ್ ಅವರು ಜನರಿಗೆ ಬೇಗ ಸ್ಪಂದನೆ ನೀಡುತ್ತಿದ್ದರು. ಜನರು ಹಾಗೂ ವೈದ್ಯರ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸಿ ರೋಗಿಗಳಿಗೆ ನೆರವಾಗಿದ್ದರು. ಅವರು ವಯೋನಿವೃತ್ತಿಯಾಗಿದ್ದರೂ ಕೂಡ ಮತ್ತೆ ಸೇವೆ ಸಲ್ಲಿಸಲು ಆರೋಗ್ಯ ಸಚಿವರಿಗೆ ಮನವಿ ನೀಡಲಾಗುವುದು ಎಂದು ಹೇಳಿದರು.

ಟ್ರಸ್ಟ್‌ನ ಸಂಸ್ಥಾಪಕ ಡಿ.ರವಿಕುಮಾರ್, ಜಿಲ್ಲಾಧ್ಯಕ್ಷ ಎ.ಸಿ.ರಮೇಶ್, ಡಾ.ಅಶ್ವಥ್, ರಾಷ್ಟ್ರಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.