ಮಂಡ್ಯ: ಆಧುನೀಕತೆಯ ಸೋಗಿನಲ್ಲಿ ಇಂದಿನ ಯುವ ಪೀಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮರೆಯುತ್ತಿದೆ ಎಂದು ಕಾವೇರಿ ತಾಂತ್ರಿಕ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಪ್ರೊ.ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಸಿದ್ದಯ್ಯನಕೊಪ್ಪಲು ಗೇಟ್ ಬಳಿಯ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ರಾಶಿ ಪೂಜೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಸೊಗಡಿನ ಆಚಾರಣೆ ಇಂದಿಗೂ ಪ್ರಸ್ತುತವಾಗಿವೆ. ಇವುಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಇಂದಿನ ಯುವ ಜನಾಂಗ ಇಂತಹ ಸಂಸ್ಕೃತಿಗಳನ್ನು ಬಿಟ್ಟು ಬೇರೆಯದ್ದೇ ಲೋಕದಲ್ಲಿ ವಿಹರಿಸುವಂತಹ ವಾತಾವರಣ ಇದೆ. ನಾವು ತಿನ್ನುವ ಆಹಾರಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕಿದೆ. ರೈತನ ಬದುಕು, ಬೆಳೆ, ರಾಸುಗಳು ಎಲ್ಲವನ್ನೂ ಇಂದಿನ ಯುವ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾವು ಸಂಕ್ರಾಂತಿ ಸುಗ್ಗಿ ಸಂಭ್ರಮ ಹಮ್ಮಿಕೊಂಡಿದ್ದೇವೆ. ಸಂಕ್ರಾಂತಿ ಹಬ್ಬವನ್ನು ಒಂದೊಂದು ಕಡೆಯಲ್ಲಿ ವಿಭಿನ್ನ ರೀತಿ ಆಚರಣೆ ಮಾಡಲಾಗುತ್ತದೆ ಎಂದರು.
ಕಾವೇರಿ ತಾಂತ್ರಿಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಎ.ರಾಜು ಮಾತನಾಡಿ, ಸೂರ್ಯ ತನ್ನ ಪಥವನ್ನು ಬದಲಿಸುವಂತಹ ದಿನ ಮಕರ ಸಂಕ್ರಮಣ ಕಾಲ. ಇಂತಹ ಕಾಲದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ ಅದಕ್ಕೆ ಪೂಜೆ ಮಾಡುವುದು ಸಂಪ್ರದಾಯ. ಇಂತಹ ಸಂಭ್ರಮದಲ್ಲಿ ಕುಟುಂಬದ ಎಲ್ಲರೂ ಭಾಗವಹಿಸುತ್ತಾರೆ. ಇದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಎಸ್.ಶ್ರೀಕಂಠಪ್ಪ, ಉಪಪ್ರಾಂಶುಪಾಲ ಪ್ರೊ.ಆರ್.ಮಂಜುನಾಥ್ ಇತರರಿದ್ದರು.