ಜಿಲ್ಲೆ

ಸಂಕ್ರಾಂತಿಗಿಲ್ಲ ಬೆಲೆ ಏರಿಕೆ ಬಿಸಿ; ಕಬ್ಬು, ಎಳ್ಳು, ಬೆಲ್ಲ ಮಾರಾಟ ಜೋರು, ಹೆಚ್ಚಳವಾಗದ ತರಕಾರಿ, ಹಣ್ಣಿನ ದರ

malli

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಬ್ಬು, ಎಳ್ಳು, ಬೆಲ್ಲ, ಕಡಲೆ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಕೃಷ್ಣರಾಜೇಂದ್ರ ಮಾರುಕಟ್ಟೆ, ಗಾಂಧಿಬಜಾರ್, ಮಲ್ಲೇಶ್ವರ, ಜಯನಗರ, ಬನಶಂಕರಿ, ನಂದಿನಿ ಬಡಾವಣೆ, ವಿಜಯನಗರ ಮಾರುಕಟ್ಟೆಗಳಲ್ಲೂ ಗ್ರಾಹಕರು ಖರೀದಿಗೆ ಮುಗಿಬೀಳುತ್ತಿರುವ ದೃಶ್ಯ ಸೋಮವಾರ ಕಂಡುಬಂದಿತು.

ಕಬ್ಬಿನ ಒಂದು ಜಲ್ಲೆ ಕೃ.ರಾ. ಮಾರುಕಟ್ಟೆಯಲ್ಲಿ 25ರಿಂದ 35 ರೂ.ಗೆ ಮಾರಾಟವಾಗುತ್ತಿದ್ದರೆ, ನಂದಿನಿ ಬಡಾವಣೆ, ಹೆಬ್ಬಾಳ, ವಿಜಯನಗರ, ಬನಶಂಕರಿ, ಮಲ್ಲೇಶ್ವರ ಮಾರುಕಟ್ಟೆಗಳಲ್ಲಿ 40ರಿಂದ 50 ರೂ.ಗೆ ಮಾರಾಟವಾಗುತ್ತಿದೆ.

ಎಳ್ಳು, ಬೆಲ್ಲ ಮಿಶ್ರಣ ಪೊಟ್ಟಣಗಳು, ವಿವಿಧ ಬಣ್ಣಗಳ ಸಕ್ಕರೆ ಅಚ್ಚುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಕಬ್ಬು, ಗೆಣಸು, ಎಳ್ಳು- ಬೆಲ್ಲಗಳ ಹೆಚ್ಚಿನ ಮಾರಾಟವಿರುವುದರಿಂದ ಹೂವಿನ ದರದಲ್ಲಿ ಅಷ್ಟಾಗಿ ಏರಿಕೆ ಕಂಡುಬಂದಿಲ್ಲ. ಕೃ.ರಾ. ಮಾರುಕಟ್ಟೆಯಲ್ಲಿ ಸೇವಂತಿಗೆ ಕೆಜಿಗೆ 100ರಿಂದ 120 ರೂ.ಗೆ ಮಾರಾಟವಾಗುತ್ತಿದೆ. ಹಬ್ಬದ ಸಂಭ್ರಮಕ್ಕೆ ತರಕಾರಿ ಬೆಲೆ ಅಷ್ಟಾಗಿ ದುಬಾರಿಯಾಗಿ ಪರಿಣಮಿಸಿಲ್ಲ. ಹಣ್ಣಿನ ಬೆಲೆಗಳು ಏರಿಕೆ ಆಗಿಲ್ಲ.

ಕಪ್ಪು ಕಬ್ಬು ತುಸು ದುಬಾರಿ: ಕೃ.ರಾ. ಮಾರುಕಟ್ಟೆಯಲ್ಲಿ

ಜೋಡಿ ಕಪು್ಪ ಕಬ್ಬು 80ರಿಂದ 120 ರೂ.ಗೆ, ಆರು ಗೇಣು ಕಬ್ಬು 30 ರೂ. ಹಾಗೂ ಅದಕ್ಕಿಂತ ಸಣ್ಣ ಕಬ್ಬು 25 ರೂ.ಗೆ ದೊರೆಯುತ್ತಿವೆ. ಗಾಂಧಿ ಬಜಾರ್ ಹಾಗೂ ಮಲ್ಲೇಶ್ವರ ಮಾರುಕಟ್ಟೆಗಳಲ್ಲಿ ಕಂದು ಬಣ್ಣದ ಜೋಡಿ ಕಬ್ಬು 80 ರೂ. ಹಾಗೂ ಕಪ್ಪು ಬಣ್ಣದ ಕಬ್ಬನ್ನು 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಗೆಣಸು ಕೆ.ಜಿ.ಗೆ 40 ರೂ., ಅರ್ಧ ಕೆ.ಜಿ.ಗೆ 25 ರೂ. ಹಾಗೂ ಒಂದು ಲೀಟರ್ ಕಡಲೆಕಾಯಿ ಬೆಲೆ 40ರಿಂದ 50 ರೂ. ನಿಗದಿಪಡಿಸಲಾಗಿದೆ. ಕೆ.ಜಿ. ಎಳ್ಳು 150ರಿಂದ 220 ರೂ., ಬೆಲ್ಲ 140ರಿಂದ 160 ರೂ., ಸಣ್ಣದಾಗಿ ಕತ್ತರಿಸಿರುವ ಕೊಬ್ಬರಿ 400- 500 ರೂ., ಕೆ.ಜಿ. ಕಡಲೆಬೀಜ 200 ರೂ. ಹಾಗೂ ಹುರಿಗಡಲೆ 120 ರೂ.ಗಳಿಗೆ ಸಿಗುತ್ತಿದೆ. ಎಳ್ಳು- ಬೆಲ್ಲದ ಮಿಶ್ರಣ ಕೆ.ಜಿ.ಗೆ 200ರಿಂದ 250 ರೂ., ಸಕ್ಕರೆ ಅಚ್ಚು 100- 150 ರೂ.ಗೆ ಮಾರಾಟವಾಗುತ್ತಿದೆ.

ವಿವಿಧೆಡೆ ಕಾರ್ಯಕ್ರಮ

ರಾಜಧಾನಿ ಆಧುನಿಕತೆಯತ್ತ ಎಷ್ಟೇ ವಾಲಿದರೂ ಹಬ್ಬಗಳ ಸಂದರ್ಭದಲ್ಲಿ ಬಹುತೇಕ ಪ್ರದೇಶಗಳು ಗ್ರಾಮೀಣ ಸೊಗಡು ನೆನಪಿಸುವಂತೆ ಸಿಂಗಾರಗೊಂಡಿವೆ. ಕೆಲವಡೆ ಸಂಕ್ರಾಂತಿ ನಿಮಿತ್ತ ಸುಗ್ಗಿ ಹಬ್ಬ, ವಿವಿಧ ದೇವಸ್ಥಾನಗಳ ಮುಂಭಾಗದಲ್ಲಿ ರಾಸುಗಳನ್ನು ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಲಿದೆ. ರಾಜರಾಜೇಶ್ವರಿನಗರ, ಹೊಸಕೆರೆಹಳ್ಳಿ, ಯಶವಂತಪುರ, ಯಲಹಂಕ, ಕೃಷ್ಣರಾಜಪುರ ಮುಂತಾದೆಡೆ ಸಂಕ್ರಾಂತಿ ಅಂಗವಾಗಿ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಾಳೆ ಸೂರ್ಯರಶ್ಮಿ ದರ್ಶನ

ಬಸವನಗುಡಿಯ ಗವಿಗಂಗಾಧರೇಶ್ವರನ ಮೇಲೆ ಬುಧವಾರ (ಜ.15) ಸಂಜೆ 4 ಗಂಟೆ ನಂತರ ಸೂರ್ಯರಶ್ಮಿ ರ್ಸ³ಲಿದೆ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿ, ಕೃತಾರ್ಥರಾಗಲು ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಲಿರುವುದರಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಪ್ರತಿವರ್ಷ ಸಂಕ್ರಾಂತಿ ಅಂಗವಾಗಿ ನಮ್ಮ ಮಳಿಗೆಯಲ್ಲಿ ಉತ್ತಮ ಗುಣಮಟ್ಟದ ಎಳ್ಳು, ಬೆಲ್ಲ್ಲ ಸಕ್ಕರೆ ಅಚ್ಚು ವ್ಯಾಪಾರ ಮಾಡುತ್ತಿದ್ದೇವೆ. ಈ ಬಾರಿ ವ್ಯಾಪಾರ ಜೋರಾಗಿದೆ. ಪ್ರತ್ಯೇಕ ಕೌಂಟರ್​ಗಳಲ್ಲೂ ಎಳ್ಳು-ಬೆಲ್ಲ ಮಾರಾಟ ಜೋರಾಗಿದೆ. ನಾಳೆ ಸಂಕ್ರಾಂತಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಆಗುವ ಸಾಧ್ಯತೆಗಳಿವೆ. | ವಾಸುಕಿ ವ್ಯಾಪಾರಿ ಗೆಣಸು, ಕಡಲೆಕಾಯಿ, ಅವರೆಕಾಯಿ ಬೇಯಿಸಿ ಸಂಕ್ರಾಂತಿಯಲ್ಲಿ ದೇವರಿಗೆ ನೈವೇದ್ಯ ಮಾಡಿ ಸೇವಿಸುವುದು ವಾಡಿಕೆ . ಈ ಬಾರಿ ವ್ಯಾಪಾರ ಉತ್ತಮವಾಗಿದೆ. | ಸಿದ್ದಣ್ಣ ವ್ಯಾಪಾರಿ ಸುಗ್ಗಿ ಹಬ್ಬ ಸಂಕ್ರಾಂತಿ. ಹಬ್ಬಗಳ ಆಚರಣೆಯಿಂದಲೇ ನಮ್ಮ ಸಂಸ್ಕೃತಿ, ಸಂಪ್ರದಾಯ ಇಷ್ಟರ ಮಟ್ಟಿಗೆ ಉಳಿದಿದೆ. ಸಂಕ್ರಾಂತಿ ಹಬ್ಬದಲ್ಲಿ ಎಳ್ಳು- ಬೆಲ್ಲ ಹಂಚುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಪ್ರತಿಯೊಬ್ಬರೂ ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ’ ಎನ್ನತ್ತ ಬಾಂಧವ್ಯ ವೃದ್ಧಿಸುವ ಗುಣ ಬೆಸೆಯುತ್ತಾರೆ. ಎಲ್ಲ ಕಾಲಕ್ಕೂ ಈ ಆಚರಣೆ ಮಹತ್ವ ಪಡೆದುಕೊಂಡಿದೆ. | ರೇಖಾ ಗ್ರಾಹಕಿ

| ದ್ವಾರಕನಾಥ ಎಲ್ ಬೆಂಗಳೂರು