ಜಿಲ್ಲೆ

ಸಕ್ಕರೆನಾಡಲ್ಲಿ ಕಳೆಗಟ್ಟಿದ ಸಂಕ್ರಾಂತಿ: ರಾಸುಗಳ ಕಿಚ್ಚು ಹಾಯಿಸಿದ ಯುವಕರು

ಮಂಡ್ಯ: ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಜಿಲ್ಲಾದ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಯಿತು.

ಹಬ್ಬದ ಹಿನ್ನಲೆಯಲ್ಲಿ ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಸಂಜೆ ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ಸಂಭ್ರಮಿಸಿದರು. ಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿದವು. ಧನುರ್ಮಾಸದ ಪ್ರಯುಕ್ತ ಕಳೆದ ಒಂದು ತಿಂಗಳಿಂದ ವಿವಿಧ ಪೂಜೆಗಳು ನಡೆಯುತ್ತಿದ್ದು, ಕೊನೆಯ ದಿನ ವಿಶೇಷ ಪೂಜೆ ವಿಜೃಂಭಣೆಯಿಂದ ನಡೆದವು. ಎಲ್ಲ ಗ್ರಾಮಗಳಲ್ಲೂ ಜನರು ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಾಲಯಗಳಲ್ಲಿ ಭಕ್ತರಿಗೆ ಬಿಸಿಬಿಸಿ ಪೊಂಗಲ್‌ನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿತ್ತು.

ಸುಗ್ಗಿಯ ಹಬ್ಬ ಸಂಕ್ರಾಂತಿ ಅಂಗವಾಗಿ ಮಹಿಳೆಯರು, ಮಕ್ಕಳು ತಮ್ಮ ನೆರೆಹೊರೆಯ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ ಬೀರಿ ಸಂತಸ ಹಂಚಿಕೊಂಡರು. ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು. ರೈತರು ತಾವು ಬೆಳೆದ ದವಸ-ಧಾನ್ಯಗಳನ್ನು ದೇವಾಲಯಗಳಿಗೆ ನೀಡಿ ಪೂಜೆ ಸಮರ್ಪಿಸಿದರು.

ಇತ್ತ ಯುವಕರು ಬೆಳಗ್ಗೆಯಿಂದಲೇ ರಾಸುಗಳನ್ನು ತೊಳೆದು ಸಿಂಗರಿಸುವ ಕಾಯಕದಲ್ಲಿ ರೈತರು ತೊಡಗಿದ್ದರು. ಆಕರ್ಷಕ ಬಣ್ಣಗಳು, ಟೇಪು, ಥರ್ಮಾಕೋಲ್, ಹೂವು, ಹಾರ, ನಿಂಬೆಹಣ್ಣುಗಳಿಂದ ಅಲಂಕರಿಸಲಾಗಿತ್ತು. ರಾಸುಗಳಿಗೆ ಅಲಂಕಾರಿಕ ಮೇಲುಹೊದಿಕೆ (ಗೌಸ) ಹಾಕಿ ಆಕರ್ಷಣೆಯನ್ನು ಹೆಚ್ಚಿಸಲಾಗಿತ್ತು. ಸಂಜೆ ಎಲ್ಲ ಗ್ರಾಮಗಳಲ್ಲಿ ರಾಸುಗಳನ್ನು ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಿತು. ಕೆಲವೆಡೆ ರಾಸುಗಳ ಸ್ಪರ್ಧೆಗಳನ್ನು ನಡೆಸಲಾಯಿತು. ಉತ್ತಮ ರಾಸುಗಳು ಹಾಗೂ ಅವುಗಳ ಅಲಂಕಾರಕ್ಕಾಗಿ ಬಹುಮಾನವನ್ನು ನೀಡಲಾಯಿತು. ಕಿಚ್ಚು ಹಾಯಿಸುವಾಗಿ ಮೊದಲು ಬಂದ ರಾಸುಗಳಿಗೆ ಬಹುಮಾನ ವಿತರಿಸಲಾಯಿತು.

ಈ ಬಾರಿ ಸರ್ ಎಂ.ವಿ. ಕ್ರೀಡಾಂಗಣದ ಆಧುನೀಕರಣ ಕಾರ್ಯನಡೆಯುತ್ತಿರುವ ಕಾರಣ ಸ್ವರ್ಣಸಂದ್ರ, ಬನ್ನೂರು ರಸ್ತೆ, ಹೊಸಹಳ್ಳಿ ವೃತ್ತ ಸೇರಿದಂತೆ ನಗರದ ವಿವಿಧೆಡೆಗಳಲ್ಲೂ ಸಹ ರಸ್ತೆಗಳಲ್ಲೇ ಜಾನುವಾರುಗಳನ್ನು ಕಿಚ್ಚು ಹಾಯಿಸಲಾಯಿತು.

ಗೋವುಗಳಿಗೆ ಗೋಗ್ರಾಸ : ತಾಲೂಕಿನ ಪಣಕನಹಳ್ಳಿ ಗ್ರಾಮದಲ್ಲಿ ಶ್ರೀ ಭೈರವೇಶ್ವರ ದೇವಾಲಯ ಆವರಣದಲ್ಲಿ ಕಿಚ್ಚು ಹಾಯಿಸುವುದಕ್ಕೆ ಮುಂಚಿತವಾಗಿ ಶ್ರೀ ಭೈರವೇಶ್ವರ ಯುವಕರ ಸಂಘ ಹಾಗೂ ಗ್ರಾಮಸ್ಥರಿಂದ ನೂರಾರು ರಾಸುಗಳಿಗೆ ಸಾಮೂಹಿಕವಾಗಿ ಗೋಗ್ರಾಸ (ಎಳ್ಳು, ಬೆಲ್ಲ, ಕಾಯಿ, ಹಿಂಡಿ-ಬೂಸಾ, ರವೆ) ನೀಡಲಾಯಿತು.

ಆಕರ್ಷಕವಾದ 40-50 ಜೋಡೆತ್ತುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಾಗುವ ರಸ್ತೆಯನ್ನು ರಂಗೋಲಿ ಇಟ್ಟು, ತಳಿರು-ತೋರಣಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಹೊಳರು ರಸ್ತೆಯಲ್ಲಿ ಜಾನುವಾರುಗಳನ್ನು ಕಿಚ್ಚು ಹಾಯಿಸಲಾಯಿತು.