ಜಿಲ್ಲೆ

ಮರೆಯಾಗುತ್ತಿದೆ ಸಂಕ್ರಾಂತಿ ಆಚರಣೆಯ ಪದ್ಧತಿ: ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಬೇಸರ

ಕೆ.ಎನ್.ರಾಘವೇಂದ್ರ

ಮಂಡ್ಯ: ವರ್ಷದಿಂದ ವರ್ಷಕ್ಕೆ ಸಂಕ್ರಾಂತಿ ಸಂಭ್ರಮ ಮರೆಯಾಗುತ್ತಿದೆ. ಜತೆಗೆ ಆಚರಣೆಗಳಲ್ಲಿಯೂ ಬದಲಾವಣೆ ಕಾಣುತ್ತಿರುವುದು ಸರಿಯಲ್ಲ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.

ಇಲ್ಲಿನ ಕಾವೇರಿನಗರ ಬಡಾವಣೆಯ 2ನೇ ಹಂತದ ಬಸ್‌ನಿಲ್ದಾಣ ಬಳಿ ಗೋರಕ್ಷಣಾ ಸಮಿತಿ ಹಾಗೂ ಕಾವೇರಿನಗರ, ದ್ವಾರಕನಗರ, ಶ್ರೀರಾಮನಗರ ನಿವಾಸಿಗಳು ಆಯೋಜಿಸಿದ್ದ ಸಂಕ್ರಾಂತಿ ಹಬ್ಬ ಪ್ರಯುಕ್ತ 4ನೇ ವರ್ಷದ ಗೋ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ವ್ಯಾಪ್ತಿಯ ಕಣದಲ್ಲಿ ರಾಶಿಕಟ್ಟಿ ಪೂಜೆ ಮಾಡಿ, ಉತ್ಸವ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಅದೆಲ್ಲ ಮರೆಯಾಗುತ್ತಿದೆ. ಈ ನಡುವೆ ನಗರ ಪ್ರದೇಶದಲ್ಲಿ ರಾಶಿ ಮತ್ತು ರಾಸು ಪೂಜೆ ಮಾಡಿತ್ತಿರುವುದು ಖುಷಿತಂದಿದೆ. ಸ್ಥಳೀಯ ನಿವಾಸಿಗಳು ಒಗ್ಗೂಡಿ ಗೋಪೂಜೆ ಮಾಡುತ್ತಿರುವುದು ಖುಷಿಯಾಗುತ್ತಿದೆ. ನಾವು ಚಿಕ್ಕವರಿದ್ದಾಗ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿರುವುದನ್ನು ನೋಡಿ ಬೆಳೆದಿದ್ದೇವೆ ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ಪ್ರಸ್ತುತ ಆಧುನಿಕ ಜೀವನ ಶೈಲಿಯಲ್ಲಿ ದಿನೇ ದಿನೇ ಸಂಕ್ರಾಅತಿಯ ಸಾಂಪ್ರದಾಯಿಕ ಸೊಗಡು ಮರೆಯಾಗುತ್ತಿದೆ. ಎಲ್ಲೋ ಒಂದು ಕಡೆ ನಾವೆಲ್ಲರೂ ಚಿಕ್ಕಂದಿನಲ್ಲಿ ನೋಡಿದ ವಿಜೃಂಬಣೆಯ ಸಂಕ್ರಾಂತಿ ವೈಭವ ಇಂದಿನ ಮಕ್ಕಳು ನೋಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಸಂಕ್ರಾಅತಿ ಸಂಭ್ರಮ ದಿನೇ ದಿನೇ ಮರೆಯಾಗುತ್ತಿದೆ. ಈ ವರ್ಷ ಭಾರತೀಯರಿಗೆ ಐತಿಹಾಸಕ ವರ್ಷವಾಗಿ ಹರ್ಷ ತರಲಿದೆ, 500 ವರ್ಷಗಳ ಹೋರಾಟದ ಫಲ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ನಾವು ಮತ್ತಷ್ಟು ಪ್ರಗತಿ ಕಾಣಲು ಸಾಧ್ಯವಾಗಲಿದೆ ಎಂದರು.

ಗೋರಕ್ಷಣಾ ಸಮಿತಿ ಮುಖಂಡ ಎಚ್.ಆರ್.ಅಶೋಕ್‌ಕುಮಾರ್ ಮಾತನಾಡಿ, ಅನ್ನದಾತ ರೈತರ ಒಡನಾಡಿ ಗೋವುಗಳನ್ನು ರಕ್ಷಿಸಬೇಕಿದೆ. ಗೋವು ಸಂತತಿ ಹೆಚ್ಚಾದರೆ ಭೂಮಿ ಫಲವತ್ತತೆ ಹೆಚ್ಚಾಗುತ್ತದೆ, ರೋಗರುಜನೆಗಳು ಕಡಿಮೆಯಾಗುತ್ತವೆ, ಗೋವು ಇರುವ ಮನೆಗಳಲ್ಲಿ ಅರೋಗ್ಯವಿರುತ್ತದೆ ಎಂದು ನುಡಿದರು.

ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜ್, ಅಪ್ಪಾಜಪ್ಪ, ಪ್ರಮೋದ್, ವೀರಭದ್ರ, ಎಸ್.ನಾರಾಯಣ್, ನಾರಾಯಣಸ್ವಾಮಿ, ನವೀನ್, ಜಯರಾಂ, ಸಂದೇಶ್ ಇತರರಿದ್ದರು.

ಇದೇ ಸಂದರ್ಭದಲ್ಲಿ ಗೋವುಗಳು ಹಾಗೂ ಭತ್ತ-ರಾಗಿ ರಾಶಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪೊಂಗಲ್ ಮತ್ತು ಸಿಹಿ ವಿತರಣೆ ನಡೆಯಿತು. ಮಕ್ಕಳು ಮತ್ತು ಯುವಕರು ತಮಟೆ-ನಗಾರಿ ನಾದಕ್ಕೆ ಕುಣಿದು ಕುಪ್ಪಳಿಸಿದರು. ಪ್ರಮುಖ ಬೀದಿಗಳಲ್ಲಿ ಗೋವುಗಳನ್ನು ಮೆರವಣಿಗೆ ಮಾಡಲಾಯಿತು.