ಬೆಂಗಳೂರು: ನಂದಿನಿ ಲೇಔಟ್ನ ಜೈ ಮಾರುತಿನಗರ ವೃತ್ತದಲ್ಲಿ ಬುಧವಾರ 7ನೇ ವರ್ಷದ ಸಂಕ್ರಾಂತಿ ಉತ್ಸವ ಸಂಭ್ರಮದಿಂದ ನಡೆಯಿತು. ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ನಂದಿನಿ ಉತ್ಸವ ಹಾಗೂ ಸಂಕ್ರಾಂತಿ ಉತ್ಸವ ಸಮಿತಿ ಆಯೋಜಿಸಿದ್ದ ಉತ್ಸವದಲ್ಲಿ ನಾಗರಿಕರು ಎಳ್ಳು, ಬೆಲ್ಲ, ಕಬ್ಬನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಡಗರದಿಂದ ಹಬ್ಬವನ್ನು ಆಚರಿಸಿದರು.
ಹೊಸ ವರ್ಷದ ಪ್ರಥಮ ಹಬ್ಬವೆಂದು ಪರಿಗಣಿಸುವ ಈ ಹಬ್ಬದಲ್ಲಿ ‘ಎಳ್ಳು ಬೀರಿ ಒಳ್ಳೆ ಮಾತಾಡಿ’ ಎಂಬ ನಾಣ್ಣುಡಿಯಂತೆ ಎಳ್ಳು-ಬೆಲ್ಲ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಗೋವುಗಳ ಕಿಚ್ಚು ಹಾಯಿಸುವ ಜತೆಗೆ ಹಳ್ಳಿಯ ಸೊಗಡಿನ ಪ್ರದರ್ಶನವು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಕಲಾತಂಡಗಳ ಪ್ರದರ್ಶನ ಸಂಕ್ರಾಂತಿ ಹಬ್ಬದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದವು. 5 ಸಾವಿರಕ್ಕೂ ಹೆಚ್ಚು ಜನರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಬಿಬಿಎಂಪಿ ಸದಸ್ಯ ಮತ್ತು ಆಯೋಜಕ ಕೆ.ವಿ. ರಾಜೇಂದ್ರ ಕುಮಾರ್ ಮಾತನಾಡಿ, ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಬಿಬಿಎಂಪಿ ಸದಸ್ಯರಾದ ಹೇಮಲತಾ ಗೋಪಾಲಯ್ಯ, ಎಂ. ಮಹದೇವ್, ನಂದಿನಿ ಬಡಾವಣೆ ಮಂಡಲ್ನ ನೂತನ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ವಾರ್ಡ್ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಕೆ.ಎನ್. ಲೋಕೇಶ್ ಮತ್ತಿತರರಿದ್ದರು.
ನಾನು ಇದೇ ಬಡಾವಣೆಯ ಹೆಣ್ಣುಮಗಳು. ಚಿಕ್ಕಂದಿನಿಂದ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇನೆ. ನಿಮ್ಮ ಸಹಕಾರದಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. | ಮೇಘನಾ ಶೆಟ್ಟಿ ಕಿರುತೆರೆ ನಟಿ ಹಳ್ಳಿಯ ಸೊಗಡಿನ ಇಂತಹ ಕಾರ್ಯಕ್ರಮ ಪ್ರತಿ ಬಡಾವಣೆಯಲ್ಲಿ ನಡೆಯಬೇಕು. | ಕೆ. ಗೋಪಾಲಯ್ಯ ಮಹಾಲಕ್ಷ್ಮಿಪುರ ಶಾಸಕ