ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಶಿಕ್ಷಕಿ ಸುಮತಿ ಹಬ್ಬದ ಕುರಿತು ಮಾತನಾಡಿ, ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸಿ ಮಕರ ರಾಶಿಗೆ ಪ್ರವೇಶಿಸುವುದರಿಂದ ಈ ಹಬ್ಬವನ್ನು ಮಕರ ಸಂಕ್ರಮಣ ಎನ್ನುತ್ತಾರೆ. ಶಾಲೆಗಳಲ್ಲಿ ಹಬ್ಬಗಳನ್ನು ಆಚರಿಸುವುದರಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯಿಸಿದಂತಾಗುತ್ತದೆ ಎಂದ ಅವರು, ಹಬ್ಬದ ಐತಿಹಾಸಿಕ ಹಾಗೂ ವೈಜ್ಞಾನಿಕ ಹಿನ್ನೆಲೆ ಕುರಿತು ಮಾಹಿತಿ ನೀಡಿದರು.
ಮಕ್ಕಳಿಂದ ಸುಗ್ಗಿ ಸಂಭ್ರಮದ ಹಾಡುಗಳು ಮತ್ತು ಸಂಕ್ರಾಂತಿ ಹಬ್ಬದ ಮಹತ್ವ ಒಳಗೊಂಡ ನಾಟಕ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ಚಿಕ್ಕ ಮಕ್ಕಳಿಗೆ ಹಣ್ಣುಗಳನ್ನು ತಲೆ ಮೇಲೆ ಎರೆಯುವ ಸಂಪ್ರದಾಯ ಅನುಸರಿಸಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಮಕ್ಕಳು ಗಾಳಿಪಟ ಹಾರಿಸುವ ಮೂಲಕ ಸುಗ್ಗಿ ಹಬ್ಬವನ್ನು ಸಂಭ್ರಮಿಸಿದರು.
ಶಾಲೆ ಕರೆಸ್ಪಾಂಡೆಂಟ್ ಗುರುರಾಜ ಅಗಡಿ, ಪ್ರಧಾನ ಆಚಾರ್ಯ ಡಾ. ಅನಿತಾ ರೈ, ಶಿಕ್ಷಕರು, ಮಕ್ಕಳು ಇದ್ದರು.