ಬೇಲೂರು : ವಿದ್ಯಾ ವಿಕಾಸ ಯೂರೋ ಕಿಡ್ಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕರ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ, ಗೋಪೂಜೆ ನೆರವೇರಿಸಿ ಎಳ್ಳು- ಬೆಲ್ಲ ವಿತರಿಸಿದರು.
ಶಾಲೆಯ ಆವರಣದಲ್ಲಿ ಕಬ್ಬಿನ ಜಲ್ಲೆ, ಭತ್ತ ಮತ್ತು ರಾಗಿ ತೆನೆ, ಜೋಳ, ಮಾವಿನ ಸೊಪ್ಪಿನ ತಳಿರು ತೋರಣ, ಹೂವಿನ ಅಲಂಕಾರಗಳು ಗಮನ ಸೆಳೆದವು. ಎತ್ತಿನ ಗಾಡಿಗೆ ಗ್ರಾಮೀಣ ಸೊಡಗಿನ ರೀತಿಯಲ್ಲಿ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಿದ್ಯಾರ್ಥಿಗಳು ಸಂಗೀತ, ನೃತ್ಯ ಪ್ರದರ್ಶಿಸಿದರು.
ಶಾಲೆ ಟ್ರಸ್ಟ್ ಅಧ್ಯಕ್ಷ ಬಿ.ಎಂ.ರಂಗನಾಥ್, ಆಡಳಿತಾಧಿಕಾರಿ ಪದ್ಮಾ ಜೈಕುಮಾರ್ ಪಾಟೀಲ್, ಟ್ರಸ್ಟಿ ಆಶಾ ರಂಗನಾಥ್, ಮಾದೇಗೌಡ ಮತ್ತು ಶಿಕ್ಷಕರಿದ್ದರು.