ಚಿಕ್ಕಬಳ್ಳಾಪುರ: ಪ್ರತಿ ವರ್ಷದಂತೆ ಮಕರ ಸಂಕ್ರಾಂತಿ ಹಬ್ಬಕ್ಕೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಗ್ರಾಹಕರು ಮುಗಿ ಬಿದ್ದಿದ್ದು, ದುಬಾರಿ ದರಕ್ಕೆ ಚೌಕಾಸಿ ವಹಿವಾಟು ನಡೆಯಿತು.
ಜಿಲ್ಲಾ ಕೇಂದ್ರದ ಬಜಾರ್ ರಸ್ತೆ, ಗಂಗಮ್ಮನಗುಡಿ ರಸ್ತೆ, ಹಳೆಯ ಬಸ್ ನಿಲ್ದಾಣ, ಎಂ.ಜಿ.ರಸ್ತೆಯಲ್ಲಿ ಕಬ್ಬು, ಅವರೇಕಾಯಿ, ಗೆಣಸು ಮತ್ತಿತರ ವಸ್ತುಗಳ ಮಾರಾಟದ ದೃಶ್ಯ ಕಂಡು ಬಂತು. ಕರೊನಾ ಸೋಂಕಿನ ನಿರ್ಬಂಧದ ಹಿನ್ನೆಲೆಯಲ್ಲಿ ಹೆಚ್ಚಿನ ಜನಜಂಗುಳಿಗೆ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಇದರ ನಡುವೆ ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವ ದೃಷ್ಯ ಕಂಡುಬಂತು.
ಒಂದು ಕೆ.ಜಿ. ಅವರೇಕಾಯಿ 80ರಿಂದ 90 ರೂ.,ಗೆಣಸು 70 ರೂಪಾಯಿ, ಕಡಲೇಕಾಯಿ 90 ರೂ., ಕಬ್ಬು ಒಂದು ಜಲ್ಲೆ 40 ರೂಪಾಯಿ ಬೆಲೆ ನಿಗದಿಪಡಿಸಿದ್ದು, ಬೇಡಿಕೆ ಹೆಚ್ಚಳದ ಹಿನ್ನೆಲೆಯಲ್ಲಿ ಆಂಧ್ರ ಸೇರಿ ವಿವಿಧೆಡೆಯಿಂದ ತರಿಸಿಕೊಂಡು ಮಾರಾಟ ಮಾಡಲಾಗುತ್ತಿದೆ. ಪ್ರತಿ ವರ್ಷದಂತೆ ವ್ಯಾಪಾರಿಗಳು ಹೆಚ್ಚಿನ ಆದಾಯ ಗಳಿಕೆಯ ನಿರೀಕ್ಷೆಯನ್ನು ಹೊಂದಿದ್ದು, ಕರೊನಾ ನಿರ್ಬಂಧ ಉಂಟು ಮಾಡಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸಪ್ಪೆ ವಹಿವಾಟು ಕಂಡು ಬಂತು.
ಆಲಯಗಳಲ್ಲಿ ವಿಶೇಷ ಪೂಜೆಯಷ್ಟೇ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಧಾರ್ಮಿಕ ಉತ್ಸವ, ಮೆರವಣಿಗೆ ಮತ್ತು ಮನರಂಜನೆ ಸೇರಿ ಹಲವು ಚಟುವಟಿಕೆಗೆ ನಿಷೇಧ ಹೇರಲಾಗಿದೆ. ಜತೆಗೆ ಆಲಯಗಳಲ್ಲಿ ಕೇವಲ ವಿಶೇಷ ಪೂಜೆ, ಭಕ್ತರ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಸಂಪ್ರದಾಯ ಇದೆ. ಜಿಲ್ಲಾ ಕೇಂದ್ರದಲ್ಲಿನ ಬಿ.ಬಿ.ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ವಿವಿಧ ಹೋಮ, ಕೇರಳದ ಕಲಾವಿದ ಮೋಹನ್‌ದಾಸ್ ತಂಡದವರಿಂದ ಚಂಡಿ ಪಂಚವಾದ್ಯದೊಂದಿಗೆ ಮುತ್ತಿನ ಪಲ್ಲಕ್ಕಿಯಲ್ಲಿ ಅಯ್ಯಪ್ಪಸ್ವಾಮಿ ದೇವರ ಮೂರ್ತಿಯ ಮೆರವಣಿಗೆ ನಡೆಯುತ್ತಿತ್ತು. ಆದರೆ, ಜಿಲ್ಲಾಡಳಿತದ ಸೂಚನೆಯಲ್ಲಿ ಈ ಬಾರಿ ಬಹುತೇಕ ಧಾರ್ಮಿಕ ಚಟುವಟಿಕೆಗೆ ಕಡಿವಾಣ ಬಿದ್ದಿದೆ. ಹಬ್ಬದ ಅಂಗವಾಗಿ ನಗರದ ಕಂದವಾರದ ಶ್ರೀ ವೆಂಕಟರಮಣಸ್ವಾಮಿ, ಬಜಾರ್ ರಸ್ತೆಯ ಶ್ರೀಕೋದಂಡರಾಮಸ್ವಾಮಿ, ಅಯ್ಯಪ್ಪಸ್ವಾಮಿ ಸೇರಿ ವಿವಿಧ ಆಲಯಗಳಲ್ಲಿ ದೇವರಿಗೆ ಅಭಿಷೇಕ ಮತ್ತು ಅಲಂಕಾರಕ್ಕೆ ಹಬ್ಬದ ಆಚರಣೆ ಸೀಮಿತವಾಗಿದೆ.
ಉತ್ಸವಗಳಿಗೆ ಕಡಿವಾಣ: ಸಂಕ್ರಾಂತಿ ಹಬ್ಬದ ದಿನದಂದು ಸೂರ್ಯನ ಕಿರಣಗಳು ಶ್ರೀ ಭೂದೇವಿ, ಶ್ರೀ ದೇವಿ ಸಮೇತ ಪವಡಿಸಿರುವ ರಂಗನಾಥಸ್ವಾಮಿಯ ಪಾದವನ್ನು ಸ್ಪರ್ಶಿಸುವ ತಾಲೂಕಿನ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ಆಲಯದಲ್ಲೂ ಭಜನೆ, ಉತ್ಸವಗಳಿಗೆ ಕಡಿವಾಣ ಹಾಕಲಾಗಿದೆ.
ಕರೊನಾದಿಂದ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಈ ವರ್ಷ ಒಳ್ಳೆಯ ವ್ಯಾಪಾರವಾಗುತ್ತಿಲ್ಲ. ಪ್ರತಿ ವರ್ಷದಂತೆ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕಬ್ಬು, ಗೆಣಸು, ಆವರೆ ಮಾರುತ್ತಿದ್ದು ಹಾಕಿದ ಬಂಡವಾಳಕ್ಕೆ ಅನುಗುಣವಾಗಿ ಲಾಭ ಬಂದರೆ ಸಾಕು. ಮುನಿರಾಜು, ವ್ಯಾಪಾರಿ, ಚಿಕ್ಕಬಳ್ಳಾಪುರ ಮಕರ ಸಂಕ್ರಾಂತಿ ಹಬ್ಬದ ದಿನದಂದು ವೀಕೆಂಡ್ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಭ್ರಮಾಚರಣೆಯ ನಿರೀಕ್ಷೆ ಇಲ್ಲ. ಮನೆಯಲ್ಲಿ ಪೂಜೆ, ಸಿಹಿ ಊಟ ಸೇವನೆಗೆ ಸೀಮಿತವಾಗಿದೆ. ರಾಗಿಣಿ, ಗೃಹಿಣಿ, ಚಿಕ್ಕಬಳ್ಳಾಪುರ