ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಭೋಗಿ ಕಾರ್ಯಕ್ರಮದ ವಿಹಂಗಮ ನೋಟ.  
ಜಿಲ್ಲೆ

ಸಂಕ್ರಮಣ ಮಹೋತ್ಸವ, ಶಾಸ್ತ್ರೋಕ್ತವಾಗಿ ನೆರವೇರಿದ ಅಕ್ಷತಾರ್ಪಣೆ-ಬೋಗಿ ಕಾರ್ಯಕ್ರಮ

Vijyapura - Parsuram Bhasagi

ವಿಜಯಪುರ: ಬೃಹತ್ ನಂದಿಕೋಲು ಮೆರವಣಿಗೆ, ಪಲ್ಲಕ್ಕಿಗಳ ಉತ್ಸವ, ವೇದ-ಮಂತ್ರಗಳ ನೀನಾದದ ನಡುವೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶಿವಯೋಗಿ ಸಿದ್ಧರಾಮನ ಯೋಗದಂಡದೊಂದಿಗೆ ಕುಂಬಾರ ಗುಂಡವ್ವಳ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿತು.

ಇಲ್ಲಿನ ಸಿದ್ಧೇಶ್ವರ ದೇವಸ್ಥಾನದ ಎದುರು ಅಲಂಕೃತ ವೇದಿಕೆಯಲ್ಲಿ ಸಿಂಗಾರಗೊಂಡಿದ್ದ ಮಂಟಪದಲ್ಲಿ ಸೋಮವಾರ ಮಧ್ಯಾಹ್ನ 12.35ಕ್ಕೆ ಕುಂಬಾರ ಗುಂಡವ್ವಳ ಅಕ್ಷತಾರ್ಪಣೆ ಬೋಗಿ ಕಾರ್ಯಕ್ರಮ ನೆರವೇರಿಸಲಾಯಿತು. ಶಿವಯೋಗಿ ಸಿದ್ಧರಾಮೇಶ್ವರ ಚರಿತ್ರೆ ಓದುವ ಕಾರ್ಯಕ್ರಮದೊಂದಿಗೆ ಶುಭ ಮಾಂಗಲ್ಯದ ಧಾರಣ ಅಕ್ಷತಾರೋಪಣ ಕಾರ್ಯಕ್ರಮದಲ್ಲಿ ತಮ್ಮ ಬಂಧುಬಾಂಧವರ ಮದುವೆಗೆ ಬಂದಂತೆ ಹೊಸ ಉಡುಗೆ ತೊಟ್ಟು ಸಹಸ್ರಾರರು ಭಕ್ತರು ಭಾಗವಹಿಸಿದ್ದರು.

ಮದುವೆ ಮಂಟಪದಲ್ಲಿ ಸಿದ್ಧರಾಮನ ಹಾಗೂ ಕುಂಬಾರ ಕನ್ಯೆಯೊಬ್ಬಳ ಮೂರ್ತಿಗಳನ್ನು ಇರಿಸಲಾಗಿತ್ತು. ಮದುಮಕ್ಕಳನ್ನು ಕೂರಿಸುವ ಮಾದರಿಯಲ್ಲಿ ಮೂರ್ತಿಗಳನ್ನಿಟ್ಟು ಶಿವಯೋಗಿಯ ಯೋಗ ದಂಡದೊಂದಿಗೆ ವಿವಾಹ ಸಾಂಕೇತಿಸಲು ಸಾಲಂಕೃತಗೊಂಡ 7 ನಂದಿಕೋಲಗಳು ಹಾಗೂ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಉತ್ಸವ ಮೂರ್ತಿ ಮನಸೂರೆಗೊಂಡವು. ಸಂಪ್ರದಾಯದಂತೆ ವಿಜಯಪುರ ನಗರ ಶಾಸಕರೂ ಆಗಿರುವ, ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ರಾ. ಪಾಟೀಲ(ಯತ್ನಾಳ) ನೇತೃತ್ವ ವಹಿಸಿದ್ದರು. ಹೆಣ್ಣು ಮಕ್ಕಳಿಗೆ ಕುಂಕುಮ ಚೀಟಿ ನೀಡಲಾಯಿತು. ವೇದಮೂರ್ತಿ ಮುರಗಯ್ಯ ಗಚ್ಚಿನಮಠ ಮದುವೆ ಸಂಪ್ರದಾಯ ನೆರವೇರಿಸಿಕೊಟ್ಟರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ಧೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

ಧಾರ್ಮಿಕ ಹಿನ್ನೆಲೆ

ಕುಂಬಾರ ಕನ್ಯೆ ಗುಂಡವ್ವ ಹಾಗೂ ಸಿದ್ಧರಾಮರ ಯೋಗದಂಡದ ಮದುವೆಗೆ ತನ್ನದೇ ಆದ ಹಿನ್ನೆಲೆ ಇದೆ. ಶಿವಯೋಗಿ ಸಿದ್ಧರಾಮರು ಬಾಲಬ್ರಹ್ಮಚಾರಿಯಾಗಿದ್ದರು. ಕಾಯಕ ಯೋಗಿಗಳಾಗಿದ್ದರು. ಅವರ ಈ ಕಾಯಕ ನಿಷ್ಠೆಗೆ ಸಾವಿರಾರು ಜನ ಅನುಯಾಯಿಗಳಾಗಿದ್ದರು. ಅದರಲ್ಲಿ ಕುಂಬಾರ ಗುಂಡವ್ವ ಸಹ ಒಬ್ಬರು. ಒಂದು ದಿನ ಕುಂಬಾರ ಗುಂಡವ್ವಳ ಕಾಯಕ ನಿಷ್ಠೆ ಹಾಗೂ ಶ್ರದ್ಧೆ ಗಮನಿಸಿದ ಸಿದ್ಧರಾಮರು ನಿನಗೇನು ವರ ಬೇಕು ಕೇಳು ಎಂದರಂತೆ. ಆಗ ಗುಂಡವ್ವ ‘ಸ್ವಾಮಿ ನಾನು ನಿಮ್ಮ ಚರಣ ದಾಸಿಯಾಗಬೇಕು, ನನ್ನನ್ನು ತಮ್ಮ ಧರ್ಮಪತ್ನಿಯಾಗಿ ಸ್ವೀಕರಿಸಿ ಮುತ್ತೈದೆ ಭಾಗ್ಯ ಕರುಣಿಸಿ’ ಎಂದರಂತೆ. ಆಗ ಅಖಂಡ ಬ್ರಹ್ಮಚಾರಿಯಾಗಿದ್ದ ಸಿದ್ಧರಾಮರು ಮದುವೆಯಾಗುವುದು ಸಾಧ್ಯವಿಲ್ಲದ ಕಾರಣ ನೀನು ನನ್ನ ಯೋಗದಂಡದೊಂದಿಗೆ ಮದುವೆಯಾಗಬಹುದೆಂದರು. ಈ ಮಾತನ್ನು ಅಕ್ಷರಶಃ ಪಾಲಿಸಿದ ಕುಂಬಾರ ಗುಂಡವ್ವ ಯೋಗದಂಡದೊಂದಿಗೆ ಶಾಸ್ತ್ರೋಕ್ತವಾಗಿ ಮದುವೆಯಾದರು ಎಂಬ ಪ್ರತೀತಿ. ಹೀಗಾಗಿ ಪ್ರತೀ ವರ್ಷ ಜಾತ್ರೋತ್ಸವದ ಸಂದರ್ಭ ಈ ಸಂಪ್ರದಾಯ ನೆರವೇರುತ್ತದೆ.