ಜಿಲ್ಲೆ

ಸಂಜೀವಿನಿ ಸೂಪರ್​ ಮಾರ್ಕೆಟ್​ ಎಲ್ಲಾ ಜಿಲ್ಲೆಗೆ ವಿಸ್ತರಣೆಗೆ ಕ್ರಮ

ಉಡುಪಿ: ಸಮೃದ್ಧಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ಆರಂಭಿಸಿರುವ 'ಸಂಜೀವಿನಿ ಸೂಪರ್​ ಮಾರ್ಕೆಟ್​' ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಹೇಳಿದರು.

ಸೋಮವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಆರಂಭಿಸಿರುವ ಸಂಜೀವಿನಿ ಸೂಪರ್​ ಮಾರ್ಕೆಟ್​ ಹಾಗೂ ಸಂಜೀವಿನಿ ಆಹಾರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುರುಷರಿಗೆ ಹೋಲಿಸಿದರೆ ಮಹಿಳೆಯರು ಶಾರೀರಿಕವಾಗಿ ಅಶಕ್ತರಿರಬಹುದು, ಆದರೆ ಮಾನಸಿಕವಾಗಿ ಪುರುಷರಿಗಿಂತ 10 ಪಟ್ಟು ಹೆಚ್ಚು ಶಕ್ತವಾಗಿದ್ದಾಳೆ. ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುವ ದೃಷ್ಟಿಯಿಂದ ಸರ್ಕಾರ ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಗೃಹ ಜ್ಯೋತಿ ಕಾರ್ಯಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಮುಖದಲ್ಲಿ ಮಂದಹಾಸ ತರುವುದೇ ಸರ್ಕಾರದ ಮುಖ್ಯ ಉದ್ದೇಶ. ಎಲ್ಲಾ ಮಹಿಳೆಯರು ಸ್ವಾಭಿಮಾನಿ ಜೀವನ ಕಟ್ಟಿಕೊಳ್ಳುವುದು ಅಗತ್ಯ ಎಂದರು.

ಫ್ಯಾಬ್​ ಇಂಡಿಯಾ ಮೊದಲಾದ ಬಹುರಾಷ್ಟ್ರೀಯ ಮಾರುಕಟ್ಟೆಗಳಿಗಿಂತಲೂ ಸಂಜೀವಿನಿ ಸೂಪರ್​ ಮಾರ್ಕೆಟ್​ನಲ್ಲಿ ಉತ್ತಮ ವಸ್ತುಗಳು ಲಭ್ಯವಿದೆ ಎಂದರು.

ಉಡುಪಿ ಶಾಸಕ ಯಶ್ಪಾಲ್​ ಸುವರ್ಣ, ಕಾಪು ಶಾಸಕ ಸುರೇಶ್​ ಶೆಟ್ಟಿ, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್​ ವರಿಷ್ಠ್ಠಾಧಿಕಾರಿ ಅಕ್ಷಯ್​ ಹಾಕೆ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ, ಉಪವಿಭಾಗಧಿಕಾರಿ ಎಸ್​.ಆರ್​.ರಶ್ಮಿ, ಉಡುಪಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಕಾಂಗ್ರೆಸ್​ ಮುಖಂಡರಾದ ಉದಯ್​ ಕುಮಾರ್​ ಶೆಟ್ಟಿ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ್​ ಕಾಂಚನ್​ ಉಪಸ್ಥಿತರಿದ್ದರು.