ಕುಂದಗೋಳ: ಎನ್‌ಆರ್‌ಎಲ್‌ಎಂ ಯೋಜನೆಯ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ 60 ಸಂಜೀವಿನಿ ಮಹಿಳಾ ಉತ್ಪಾದಕರ ಕಂಪನಿ ರಚಿಸಲಾಗಿದ್ದು. ತಾಲೂಕು ಮಟ್ಟದಲ್ಲಿ ಸಂಜೀವಿನಿ ಯೋಜನೆಯಡಿ ಸ್ವ ಸಹಾಯ ಗುಂಪಿನ 1000 ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಕಿಸಾನ ಉತ್ಪಾದಕರ ಕಂಪನಿ ರಚಿಸಲಾಗಿದೆ. ಇದರ ಸದುಪಯೋಗ ಪಡೆದು ಉತ್ತಮ ಕೃಷಿ ಜೀವನೋಪಾಯ ಚಟುವಟಿಕೆ ಅಳವಡಿಸಿಕೊಳ್ಳಬೇಕು ಎಂದು ತಾಪಂ ಇಒ ಜಗದೀಶ ಕಮ್ಮಾರ ಹೇಳಿದರು.
ಪಟ್ಟಣದ ಶ್ರೀಕಲ್ಯಾಣಪುರದ ಬಸವಣ್ಣಜ್ಜನವರ ಸಭಾಭವನದಲ್ಲಿ ಶ್ರೀನಿಧಿ ಸಂಜೀವಿನಿ ಮಹಿಳಾ ಕಿಸಾನ ಪ್ರೊಡ್ಯೂಸರ್ ಕಂಪನಿ ಲಿ. ವತಿಯಿಂದ ಇತ್ತೀಚೆಗೆ ಜರುಗಿದ ಮೊದಲನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಮಹಿಳಾ ರೈತ ಉತ್ಪಾದಕ ಗುಂಪುಗಳಿಗೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಮತ್ತು ಸರಿಯಾದ ಬೆಲೆ ಒದಗಿಸಿ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸುವುದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಪಂಚಾಯತ್ ರಾಜ್ ಇಲಾಖೆ ಕುಂದಗೋಳದ ಸಹಾಯಕ ನಿರ್ದೇಶಕ ಶರಣಬಸಪ್ಪ ಜಂತಕಲ್ ಮಾತನಾಡಿ, ಪುರುಷರಿಗಿಂತ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಹೆಚ್ಚಾಗಿರುವುದು. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ ಎಂದರು.
ಎನ್‌ಆರ್‌ಎಲ್‌ಎಂನ ಜಿಲ್ಲಾ ವ್ಯವಸ್ಥಾಪಕ ಮಹೇಶ ಪಾಟೀಲ ಮಾತನಾಡಿ, ಸಂಜೀವಿನಿ ಯೋಜನೆಯು ನಿರಂತರವಾಗಿ ಮಹಿಳಾ ಸಬಲೀಕರಣ ಕಾರ್ಯದಲ್ಲಿ ತೊಡಗಿದೆ. ಯೋಜನೆಯ ಭಾಗವಾಗಿ ಶ್ರೀನಿಧಿ ಮಹಿಳಾ ಪ್ರೊಡ್ಯೂಸರ್ ಕಿಸಾನ್ ಕಂಪನಿ ಲಿ.ಅನ್ನು ರೈತ ಮಹಿಳಾ ಸಬಲೀಕರಣಗೋಸ್ಕರವೇ ಕುಂದಗೋಳದಲ್ಲಿ ಸ್ಥಾಪಿಸಲಾಗಿದೆ. ಕೃಷಿ ವ್ಯವಹಾರಗಳನ್ನು ನಡೆಸಲು ಮತ್ತು ಒಟ್ಟಾಗಿ ಕೆಲಸ ಮಾಡಿ ರೈತ ಉತ್ಪಾದಕ ಗುಂಪುಗಳಿಗೆ ಸಹಕರಿಯಾಗಿದೆ ಎಂದು ಹೇಳಿದರು.
ಪ್ರಶಾಂತ ಕಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಕುಮಾರ ನಾಯಕ, ಗೌರಮ್ಮ ಕಟ್ಟಿಮನಿ, ಪ್ರಶಾಂತ ಕಾಳಗಿ, ಪರಪ್ಪ ಕಾಂಬಳೆ, ಮಂಜುನಾಥ ನಾಯ್ಕರ ಇತರರಿದ್ದರು.