ಬೆಳಗಾವಿ: ಮಹಾರಾಷ್ಟ್ರದ ರಾಜ್ಯಸಭೆ ಸದಸ್ಯ ಹಾಗೂ ಶಿವಸೇನೆ ರಾಜ್ಯ ವಕ್ತಾರ ಸಂಜಯ್ ರಾವುತ್ ಅವರು ಬುಧವಾರ ಇಲ್ಲಿನ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬುಧವಾರ ಪ್ರಕರಣವೊಂದರ ವಿಚಾರಣೆಗೆ ಹಾಜರಾದರು.
2018ರ ಮಾರ್ಚ್ 30ರಂದು ಇಲ್ಲಿನ ಭಾಗ್ಯನಗರದಲ್ಲಿ ವೆಬ್‌ಸೈಟ್‌ವೊಂದರ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಸಂಜಯ ರಾವುತ್ ಕನ್ನಡಿಗರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು. ‘ಕರ್ನಾಟಕದಲ್ಲಿ ಮಹಾರಾಷ್ಟ್ರದ ಒಂದು ಬಸ್‌ಗೆ ಕಲ್ಲು ಎಸೆದರೆ, ಮಹಾರಾಷ್ಟದಲ್ಲಿ ಕರ್ನಾಟಕದ 100 ಬಸ್‌ಗಳಿಗೆ ಬೆಂಕಿ ಹಚ್ಚುತ್ತೇವೆ’ ಎಂದು ಹೇಳಿದ್ದರು. ಅವರ ವಿರುದ್ಧ ಟಿಳಕವಾಡಿ ಠಾಣೆ ಪೊಲೀಸರು ‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ’ ದೂರು ದಾಖಲಿಸಿದ್ದರು.
ಸಂಜಯ ರಾವುತ್ ಮಾತನಾಡಿ, ಮಹಾರಾಷ್ಟ ಏಕೀಕರಣ ಸಮಿತಿಯ ಪ್ರಚಾರ ಕರ್ನಾಟಕದಲ್ಲಿ ಯಾವಾಗಲೂ ನ್ಯಾಯಾಲಯದಿಂದ ಪ್ರಾರಂಭವಾಗುತ್ತದೆ. ನಮ್ಮ ಪ್ರಕರಣ ಇದ್ದಿದ್ದರಿಂದ ನಾನು ನ್ಯಾಯಾಲಯಕ್ಕೆ ಹಾಜರಾಗಿದ್ದೇನೆ ವಿಧಾನಸಬೆ ಚುನಾವಣೆ ಹಿನ್ನೆಲೆಯಲ್ಲಿ ಖಾನಾಪುರ, ದಕ್ಷಿಣ, ಉತ್ತರ ಮತಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದೇನೆ ಎಂದರು.
ರಾವುತ್ ಪರ ವಕೀಲ ಶಾಮಸುಂದರ್ ಪತ್ತಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ರಾವುತ್ ಅವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿತ್ತು. ಬುಧವಾರ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪ್ರಕ್ರಿಯೆ ಕ್ರಮಬದ್ಧಗೊಳಿಸಿದರು’ ಎಂದು ತಿಳಿಸಿದರು. ಶುಭಂ ಶೆಳಕೆ, ಅರವಿಂದ ನಾಗನೂರಿ, ಪ್ರಕಾಶ ಶಿರೋಳ್ಕರ್, ಅಮರ್ ಯಳ್ಳೂರಕರ್ ಇದ್ದರು.