ಜಿಲ್ಲೆ

ಸಂಗೊಳ್ಳಿ ರಾಯಣ್ಣ ಮಹಾನ್ ದೇಶಪ್ರೇಮಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಸಂಗೊಳ್ಳಿ ರಾಯಣ್ಣ ಮಹಾನ್ ದೇಶಪ್ರೇಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


ತಾಲೂಕಿನ ಉತ್ತನಹಳ್ಳಿಯ ಶ್ರೀ ಮಾರಮ್ಮ ದೇವಿಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ 15. ನೇಣು ಹಾಕಿದ್ದು ಜನವರಿ 26. ಅಂದೇ ನಮ್ಮ ಸಂವಿಧಾನ ಜಾರಿಗೆ ಬಂದಿತು. ಇದು ಕಾಕತಾಳೀಯವಾದರೂ ರಾಯಣ್ಣ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು.

ಸಂಗೊಳ್ಳಿಯಲ್ಲಿ 110 ಎಕರೆ ಜಾಗ ನೀಡಿ ಅಲ್ಲಿ ಸೈನಿಕ ಶಾಲೆಯನ್ನು ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ತೆರೆಯಲಾಗಿದೆ. ರಾಕ್ ಗಾರ್ಡನ್, ವಸ್ತು ಸಂಗ್ರಹಾಲಯ, ಪ್ರಾಧಿಕಾರ ಮಾಡಲಾಗಿದ್ದು, 285 ಕೋಟಿ ರೂ. ವೆಚ್ಚದಲ್ಲಿ ಆಗಿದೆ. ಅವರ ಜ್ಞಾಪಕಾರ್ಥವಾಗಿ ಇದನ್ನು ಮಾಡಲಾಗಿದೆ. ಜನರು ಅಲ್ಲಿಗೆ ಭೇಟಿ ನೀಡಬೇಕೆಂದು ಸಲಹೆ ನೀಡಿದರು.


ಅಪ್ರತಿಮ ದೇಶಭಕ್ತನ ಪ್ರತಿಮೆ ಸ್ಥಾಪಿಸುತ್ತಿರುವುದು ಸಂತಸದ ಸಂಗತಿ. ಯಾಳಿಗೆಹುಂಡಿಯಲ್ಲಿ ಕೆಲಸಗಳಾಗಿಲ್ಲ. ವಿಶೇಷ ಅನುದಾನ ನೀಡಿ ಇಲ್ಲಿನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಭರವಸೆ ನೀಡಿದರು.

ಬಳಿಕ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿದರು. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಇನ್ನಿತರರಿದ್ದರು.