ಜಿಲ್ಲೆ

ಸಂಗೊಳ್ಳಿ, ನಂದಗಡ ಸಮಗ್ರ ಅಭಿವೃದ್ಧಿಗೆ ಬದ್ಧ, ಸಿಎಂ ಭರವಸೆ

ಜಗದೀಶ ಹೊಂಬಳಿ

ಬೆಳಗಾವಿ: ಕ್ರಾಂತಿವೀರ ರಾಯಣ್ಣನ ಹುಟ್ಟೂರು‌ ಸಂಗೊಳ್ಳಿ ಮತ್ತು ನೇಣುಗಂಬಕ್ಕೇರಿದ ಖಾನಾಪುರ ತಾಲೂಕಿನ ನಂದಗಡದ ಸಮಗ್ರ‌ಅಭಿವೃದ್ಧಿಗೆ‌ ಸರ್ಕಾರ‌ ಬದ್ಧವಿದ್ದು, ಮುಂಬರುವ ದಿನಗಳಲ್ಲಿ ಜೆಚ್ಚಿನ ಅನುದಾನ‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಲಾಖೆಯ ಆಶ್ರಯದಲ್ಲಿ ಬೈಲಹೊಂಗಲ್ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ(ಜ.17) ಏರ್ಪಡಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಯಣ್ಣನ ಹುಟ್ಟೂರು ಸಂಗೊಳ್ಳಿ ಹಾಗೂ ನೇಣುಗಂಬಕ್ಕೆ ಏರಿಸಿದ ನಂದಗಡ ಅಭಿವೃದ್ಧಿಗೆ 2016-17 ನೇ ಸಾಲಿನಲ್ಲಿ ಪ್ರಾಧಿಕಾರ ರಚಿಸಲಾಗಿದೆ. 

ರಾಯಣ್ಣನ ಹೆಸರು ಚಿರಸ್ಥಾಯಿಯಾಗಿಸಲು ಸಂಗೊಳ್ಳಿ ಮತ್ತು ನಂದಗಡ ಅಭಿವೃದ್ಧಿಗೆ ರಚಿಸಲಾದ ಪ್ರಾಧಿಕಾರಕ್ಕೆ 268 ಕೋಟಿ ರೂ. ನೀಡಲಾಗಿದೆ. ಸೈನಿಕ ಶಾಲೆಗೆ ನೂರು ಎಕರೆ ಜಮೀನು ನೀಡಲಾಯಿತು. 

ಅಪ್ಪಟ ದೇಶಭಕ್ತ ರಾಯಣ್ಣ ಯುವಕರಿಗೆ ಸ್ಫೂರ್ತಿಯಾಗಬೇಕು ಎಂಬ ಕಾರಣಕ್ಕ ಶಿಲ್ಪವನ ನಿರ್ಮಿಸಲಾಗಿದೆ. ಬಾಲಕಿಯರು ಸೇರಿ 230 ವಿದ್ಯಾರ್ಥಿಗಳು ಸೈನಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ದೇಶಪ್ರೇಮ ಬೆಳೆಸಲು ಶಾಲೆ ಪ್ರೇರಣೆಯಾಗಿದೆ.

ಸಂಗೊಳ್ಳಿ ರಾಯಣ್ಣನಲ್ಲಿದ್ದ ತಾಯ್ನಾಡಿನ ಪ್ರೇಮವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು.

ಮೊಗಲರು‌ ಹಾಗೂ ಬ್ರೀಟಿಷರು ಸ್ವಂತ‌ ಸಾಮರ್ಥ್ಯದಿಂದ ಭಾರತವನ್ನು ಆಳಲಿಲ್ಲ; ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ನಮ್ಮನ್ನು ಆಳುವಲ್ಲಿ ಯಶಸ್ವಿಯಾದರು.

ದೇಶಕ್ಕೆ ಸ್ವಾತಂತ್ರ್ಯ‌ ತಂದು ಕೊಟ್ಟಿರುವುದು ಮಹಾತ್ಮಾ‌ಗಾಂಧೀಜಿ ನೇತೃತ್ವದ ಕಾಂಗ್ರೆಸ್‌ ಎಂಬುದನ್ನು ಮರೆಯುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು‌ ಡಾ.ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ಇಂತಹ ಮಹನೀಯರ ಹೋರಾಟದ ಬದುಕು, ಚರಿತ್ರೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

ನಾವು ಇತಿಹಾಸವನ್ನು ತಿಳಿದುಕೊಳ್ಳದಿದ್ದರೆ ರಾಜಾ ವೆಂಕಟಪ್ಪ‌ ನಾಯಕರು, ಸಂಗೊಳ್ಳಿ ರಾಯಣ್ಣ, ಚೆನ್ನಮ್ಮನಂತಹ ಮಹನೀಯರು ಜನಮಾನಸದಿಂದ ಮರೆಯಾಗಿಬಿಡುತ್ತಾರೆ. ಆದ್ದರಿಂದ ಅವರ ಹೆಸರು‌ ಚಿರಸ್ಥಾಯಿಯಾಗಿಸುವ ಕೆಲಸವನ್ನು ಸರಕಾರ‌ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಅನ್ನ ನೀಡುವ ರೈತರು; ಅಕ್ಷರ ಕಲಿಸುವ ಶಿಕ್ಷಕರು ಹಾಗೂ ದೇಶ ಕಾಯುವ ಸೈನಿಕರ‌ ಗೌರವಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.

ನಾವು ಸಂಗೊಳ್ಳಿ ರಾಯಣ್ಣ ಆಗದಿದ್ದರೂ ಪರವಾಗಿಲ್ಲ; ಅವರ ದೇಶಪ್ರೇಮವನ್ನಾದರೂ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಜಾತಿಧರ್ಮ‌ ಬದಿಗಿಟ್ಟು‌ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ರಾಜ್ಯ ಆರ್ಥಿಕವಾಗಿ ಸಬಲವಾಗಿದೆ:

ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಸಮರ್ಪಕವಾಗಿ‌ ಅನುಷ್ಠಾನಗೊಳಿಸಿಯೂ ಕರ್ನಾಟಕ ರಾಜ್ಯ ಆರ್ಥಿಕವಾಗಿ ಸಬಲವಾಗಿದೆ‌. ಸರ್ಕಾರ‌ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಒಂದು ವೇಳೆ ದಿವಾಳಿಯಾಗಿದ್ದರೆ ಪಂಚ ಗ್ಯಾರಂಟಿ‌ ಯೋಜನೆಗಳನ್ನು ಮತ್ತು ಇತರೆ ಅಭಿವೃದ್ಧಿ ಯೋಜನೆ‌ ಜಾರಿಗೊಳಿಸಲು ಹೇಗೆ ಸಾಧ್ಯವಿತ್ತು ಎಂದು ಪ್ರಶ್ನಿಸಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಂಗೊಳ್ಳಿ ರಾಯಣ್ಣನವರ ಹೆಸರು ದೇಶದಾದ್ಯಂತ ಪ್ರಸಿದ್ಧಿಗೊಳಿಸಲು ಅನುಕೂಲವಾಗುವಂತೆ ಸೈನಿಕ ಶಾಲೆ ಆರಂಭಿಸಲಾಗಿದೆ. ಈ ಶಾಲೆ ಇಡೀ ದೇಶಕ್ಕೆ‌ ಮಾದರಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸ್ಥಳೀಯ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಅನುಕೂಲವಾಗುವಂತೆ ರಾಜ್ಯದಾದ್ಯಂತ ಸೈನಿಕ ಶಾಲೆಯ ಮಾದರಿ‌ಯಲ್ಲಿ ಸಂಗೊಳ್ಳಿ ರಾಯಣ್ಣ ಶಾಲೆಗಳನ್ನು ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಚಿವರಾದ ಶಿವರಾಜ್ ತಂಗಡಗಿ, ಸುರೇಶ್ ಬಿ‌.ಎಸ್. ಅವರು ಮಾತನಾಡಿದರು.

ಮಾಜಿ ಸಚಿವ ಹಾಗೂ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಧ್ಯಯನ ಸಮಿತಿ ಅಧ್ಯಕ್ಷರ ಎಚ್.ಎಂ.ರೇವಣ್ಣ, ಅಪ್ಪಟ ದೇಶಪ್ರೇಮಿ ಹಾಗೂ ಕೆಚ್ಚೆದೆಯ ಹೋರಾಟಗಾರನಾದ ಸಂಗೊಳ್ಳಿ ರಾಯಣ್ಣನ ಚರಿತ್ರೆ ಮೆಲುಕು ಹಾಕುವುದರ‌ ಜತೆಗೆ ಯುವಪೀಳಿಗೆಗೆ ತಲುಪಿಸಲು ಉತ್ಸವದ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಈ ಭಾಗದ ಜನರ ಆಶಯದಂತೆ ಸುಸಜ್ಜಿತ ಸೈನಿಕ ಶಾಲೆ ಹಾಗೂ ಶಿಲ್ಪವನ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದರು.

ಸಾನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ, ಮಕ್ಕಳನ್ನು ಸೈನ್ಯಕ್ಕೆ ಸೇರಿಸಲು‌ ಹಾಗೂ ದೇಶಪ್ರೇಮವನ್ನು ಬೆಳೆಸಲು ಸೈನಿಕ ಶಾಲೆ ಅನುಕೂಲಕರವಾಗಿದೆ ಎಂದರು.

ಸಂಗೊಳ್ಳಿ ಹಿರೇಮಠದ ಗುರು ಸಿದ್ಧಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ಚನ ನೀಡಿದರು.

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.

ಇದೇ ವೇಳೆ ಲೋಕೋಪಯೋಗಿ ಇಲಾಖೆಯ ಕೆಲಸಕಾರ್ಯಗಳಿಗೆ ಅನುಕೂಲವಾಗುವಂತೆ ನೂತನ ಮುಖ್ಯ ಎಂಜಿನಿಯರ್ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌ ಆನ್ ಲೈನ್ ಮೂಲಕ ಉದ್ಘಾಟಿಸಿದರು.

ಅಶೋಕ ಪಟ್ಟಣ, ಸಂಸದೆ ಮಂಗಲ ಅಂಗಡಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಶಾಸಕರಾದ ಆಸಿಫ್ ಸೇಠ್, ಗಣೇಶ್ ಹುಕ್ಕೇರಿ, ಬಾಬಾಸಾಹೇಬ್ ಪಾಟೀಲ, ಮಹೇಂದ್ರ ತಮ್ಮಣ್ಣವರ, ವಿಶ್ವಾಸ್ ವೈದ್ಯ, ಮಾಜಿ ಸಚಿವರು ಹಾಗೂ ಶಾಸಕರಾದ ಎಚ್.ವೈ.ಮೇಟಿ, ಎಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯ ನಾಗರಾಜ್,  ಅಂಜಲಿ ನಿಂಬಾಳ್ಕರ್, ಗ್ರಾಪಂ ಅಧ್ಯಕ್ಷೆ ರೂಪಾ ಚಚಡಿ ಇದ್ದರು.