ಬೆಂಗಳೂರು: ಕನ್ನಡ ಸಂಗೀತ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿದ್ದ ದಿ.ಜಿ.ವಿ. ಅತ್ರಿಯವರು ಸ್ಥಾಪಿಸಿರುವ ಸಂಗೀತ ಗಂಗಾ ಸಂಸ್ಥೆಯ 31ನೇ ವಾರ್ಷಿಕೋತ್ಸವವು ಡಿ.15ರಂದು ನಡೆಯಲಿದೆ.
ಕೊಮ್ಮಘಟ್ಟದಲ್ಲಿರುವ ಜಿ ವಿ ಅತ್ರಿ ಕಲಾಮಂಟಪದಲ್ಲಿ ಡಿ.15 ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಸಂತ ಶಿಶುನಾಳ ಶರೀಫ ಪ್ರಶಸ್ತಿ ವಿಜೇತ ಗಾಯಕ ಕನಕಗಿರಿ ಹುಸೇನ್ ಸಾಬ್ ರವರಿಗೆ 2024ನೇ ಸಾಲಿನ ರಾಜ್ಯಮಟ್ಟದ ‘ಸಂಗೀತ ಗಂಗಾ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ನಾಡೋಜ ಡಾ. ಬಿ ಕೆ ಸುಮಿತ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಶಸ್ತಿ ಪ್ರದಾನವನ್ನು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಸಂಜಯ್ ಸೂರಿ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ಖ್ಯಾತ ಗಮಕಿ ಗಾಯಕ ಎಂ. ಆರ್. ಸತ್ಯನಾರಾಯಣ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಪಂ. ಡಾ. ಸತೀಶ್ ಹಂಪಿಹೊಳಿ, ರಮ್ಯಾ ಮತ್ತಿತರರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಕನಕಗಿರಿ ಹುಸೇನ್ ಸಾಬ್ ಸಂಗೀತ ಸುಧಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.