ಮಂಗಳೂರು: ಹಿಂದೂಗಳು ಶ್ರದ್ಧಾಭಕ್ತಿಯಿಂದ ಪೂಜಿಸುವ ಶ್ರೀಮಹಾಗಣಪತಿ ದೇವರಿಗೆ ಕೈಸ್ತ ಬಾಂಧವರು ಪೂಜೆ ಸಲ್ಲಿಸಿದ ಅಪರೂಪದ ಘಟನೆ ಮಂಗಳೂರಿನ ಸಂಘನಿಕೇತನದಲ್ಲಿ ನಡೆದಿದೆ.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಸಾಮರಸ್ಯ ಹಾಗೂ ಸೌಹಾರ್ದತೆಯ ಗಣೇಶೋತ್ಸವದ ಭೇಟಿ ಕಾರ್ಯಕ್ರಮವನ್ನು 2014ರಿಂದ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿಯೂ ಈ ವೇದಿಕೆಯ ಸದಸ್ಯರು ಸಂಘನಿಕೇತನಕ್ಕೆ ಭೇಟಿ ನೀಡಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕರ್ನಾಟಕ ಬ್ಯಾಂಕಿನ ಎಜಿಎಂ ಜೇನ್ ಮರಿಯಾ ಸಲ್ದಾನ ನೇತೃತ್ವದಲ್ಲಿ ಕೈಸ್ತ ಬಾಂಧವರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸಂಪಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೇರೊ, ಬಾಲಗಂಗಾಧರನಾಥ್ ತಿಲಕರ ಆಶಯದಂತೆ ಪ್ರತಿ ಮನೆಮನೆಗಳಲ್ಲಿ, ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಯಿಂದ ಭಾರತೀಯ ಸಮಾಜ ಒಗ್ಗೂಡಲು ಸಾಧ್ಯ ಎಂಬ ಪರಿಕಲ್ಪನೆಯಲ್ಲಿ ಇಂದು ಗಣೇಶೋತ್ಸವದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯವಾಗುತ್ತಿದೆ. ಕರಾವಳಿಯಲ್ಲಿ ಕೋಮುಸೌಹಾರ್ದತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದ್ದು, ಸಮಾನತೆ, ರಾಷ್ಟ್ರೀಯತೆ ಹಾಗೂ ಸಾಮರಸ್ಯಕ್ಕಾಗಿ ಈ ಬೇಟಿ. ಪ್ರತೀ ಬಾರಿಯೂ ಸಂಘನಿಕೇತನಕ್ಕೆ ಭೆಟಿ ನೀಡಿ ಪೂಜೆ ಸಲ್ಲಿಸಲಾಗುತ್ತದೆ, ನಮ್ಮ ಬೇಟಿಗೆ ಇಲ್ಲಿ ಬೇದಬಾವವಿಲ್ಲದೆ ವಿಶೇಷ ಆತಿಥ್ಯ ನೀಡುತ್ತಿದ್ದಾರೆ ಎಂದರು.
ಗಣೇಶೋತ್ಸವಕ್ಕೆ ಆಗಮಿಸಿದ ಕ್ರೈಸ್ತ ಸಮುದಾಯದ ಅತಿಥಿಗಳಿಗೆ ಪ್ರಸಾದ ಹಾಗೂ ಉಪಹಾರಗಳನ್ನು ನೀಡೋ ಮೂಲಕ ಆರ್‌ಎಸ್‌ಎಸ್‌ನ ಮುಖಂಡರು ಆತಿಥ್ಯವನ್ನು ನೀಡಿದರು.ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ಈ ಗಣೇಶನ ಭೇಟಿ ನಡೆದಿದ್ದು ಸಾಕಷ್ಟು ಜನ ಕ್ರೈಸ್ತ ಮುಖಂಡರು ಭಾಗಿಯಾಗಿದ್ದರು .ಧಾರ್ಮಿಕ ವಿಚಾರವಾಗಿ ಶಾಂತಿ ಸೌಹಾರ್ದತೆ ಕದಡೋ ಈ ಸಮಯದಲ್ಲಿ ಇಂತಹ ಆಚರಣೆ ಹೆಚ್ಚು ಸೂಕ್ತ ಎಂಬುವುದು ಸಮಘಟಕರ ಅಭಿಪ್ರಾಯ.
ಕರ್ನಾಟಕ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಲೀನಾ ಮೊಂತೆರೋ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಉದ್ಯಮಿಗಲಾದ ಪ್ರಶಾಂತ್ ಸನಿಲ್, ಗ್ರಗರಿ ಡಿಸೋಜ, ನವೀನ್ ಕಾರ್ಡೋಜಾ, ನವೀನ್ ಫೆರ್ನಾಂಡಿಸ್ ಕುಲಶೇಖರ, ಉಪನ್ಯಾಸಕ ಡಾ. ಜೆಫ್ರಿ ರೋಡ್ರಿಗಸ್, ರೋಟರಿ ಲ್ಯಾನಿ ಪಿಂಟೊ, ವಕೀಲ ಝೀಟಾ ಮೊರಸ್, ಸಾಮಾಜಿಕ ಕಾರ್ಯಕರ್ತ ಜುಲಿಯೆಟ್ ಡಿಕುನ, ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಎಂ. ಸತೀಶ ಪ್ರಭು, ಕಾರ್ಯದರ್ಶಿ ಗಜಾನನ ಪೈ, ಜಿ.ಸುರೇಶ್ ವಿ.ಕಾಮತ್, ಯು.ನಂದನ ಮಲ್ಯ, ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಗರೋಡಿ ಸಹಿತ ಹಲವರಿದ್ದರು.
-----------------
ಗಣೇಶೋತ್ಸವ ಸಮಿತಿ ವಿಶೇಷ ಸನ್ಮಾನ
ಈ ವೇಳೆ ಸಂಘನಿಕೇತನದಿಂದ ಕ್ರೈಸ್ತ ಬಾಂಧವರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಪ್ರತೀ ವರ್ಷ ತೆನೆಹಬ್ಬಕ್ಕೆ ಹಿಂದೂಗಳಿಗೆ ಉಚಿತವಾಗಿ ತೆನೆ ಒದಗಿಸುವ ಹಾಗೂ ಗಣಪತಿ ವಿಸರ್ಜನೆಗೆ ಹಲವಾರು ಬೋಟುಗಳನ್ನು ಒದಗಿಸುವ ಸಾಮಾಜಿಕ ಕಾರ್ಯಕರ್ತ ಹಾಗೂ ಕೃಷಿಕ ಅರ್ಬರ್ಟ್ ಡಿಸೋಜ ಜೆಪ್ಪು ಅವರನ್ನು ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
-------------------
ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಶಕ್ತಿ ಕೇಂದ್ರ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯುವ 77 ನೇ ವರ್ಷದ ಈ ಗಣೇಶೋತ್ಸವ ಸಾಮರಸ್ಯಕ್ಕೂ ಸಾಕ್ಷಿಯಾಗಿದೆ. ಐದು ದಿನಗಳ ಕಾಲ ಪೂಜಿಸಲ್ಪಡುವ ಈ ಗಣೇಶನ ಮೂರ್ತಿಯನ್ನು ಸೆ.11ರಂದು ಬೃಹತ್ ಮೆರವಣಿಗೆಯೊಂದಿಗೆ ಸಾಗಿ ವಿಸರ್ಜನೆ ನಡೆಯಲಿದೆ. ಒಟ್ಟಿನಲ್ಲಿ ಹಿಂದೂ ಹಾಗೂ ಕ್ರೈಸ್ತರ ನಡುವಿನ ಬಾಂಧವ್ಯಕ್ಕೆ ಈ ಗಣೇಶೋತ್ಸವ ಸಾಕ್ಷಿಯಾಗಿದೆ.
ಎಂ. ಸತೀಶ ಪ್ರಭು, ಉಪಾಧ್ಯಕ್ಷ
ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ