ಉಡುಪಿಯ ಉದ್ಯಮಿ ಅಜಯ್ ಪಿ. ಶೆಟ್ಟಿ ಆಶಯ
ಸಂಗಮ ಸಮೂಹ ಕಲಾಪ್ರದರ್ಶನ ಉದ್ಘಾಟನೆ
ಹಳೆಯ ಸ್ನೇಹಿತ ಕಲಾವಿದರು ಎರಡು ದಶಕದ ಬಳಿಕ ಒಂದೆಡೆ ಸೇರಿ ತಮ್ಮ ಕಲಾ ನೈಪುಣ್ಯತೆ ಪ್ರದರ್ಶಿಸುವುದರೊಂದಿಗೆ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಉಡುಪಿಯ ಕಲಾವಲಯದಲ್ಲಿ ಸಾಕಷ್ಟು ಉತ್ತಮ ಕಲಾ ಪ್ರತಿಭೆಗಳಿದ್ದು, ಅವರನ್ನು ಪೋಷಿಸಿ, ಪ್ರೋತ್ಸಾಹಿಸಬೇಕಿದೆ. ತನ್ಮೂಲಕ ಉಡುಪಿಯ ಕಲಾ ಪರಂಪರೆ ಜಗತ್ತಿಗೆ ತಿಳಿಯುವಂತಾಗಬೇಕು ಎಂದು ಮಧುರಂ ವೈಟ್ ಲೋಟಸ್ನ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾಶಾಲೆಯ 2002-2007ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಕಲಾಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಆ.31ರ ವರೆಗೆ ಆಯೋಜಿಸಿರುವ ಸಂಗಮ ಸಮೂಹ ಕಲಾಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಆಗಸ್ಟ್ 23ರಂದು ಉದ್ಘಾಟಿಸಿ ಮಾತನಾಡಿದರು.
ದೈವಿಕ ಭಾವನೆಯ ಸೃಜನೆ
ಸ್ಮರಣಿಕಾ ಸಂಸ್ಥೆಯ ಮಾಲೀಕ ದಿವಾಕರ ಸನಿಲ್ ಮಾತನಾಡಿ, ಗಣೇಶೋತ್ಸವದ ಸಂದರ್ಭದಲ್ಲಿ ಗಣಪತಿಯ ಕುರಿತಾದ ವಿವಿಧ ಚಿತ್ರಗಳು ಮನಸೂರೆಗೊಳ್ಳುವಂತಿದೆ. ಕಲೆಯ ಆರಾಧನೆಯೂ ದೈವಿಕ ಭಾವನೆಯನ್ನು ಸೃಜಿಸುತ್ತದೆ ಎಂದರು.
13 ಕಲಾವಿದರು ಗಣೇಶನ ಕುರಿತಾಗಿ 30ಕ್ಕೂ ಅಧಿಕ ಕಲಾಕೃತಿ ರಚಿದ್ದಾರೆ. ಆ.31ರ ವರೆಗೆ ಮಧ್ಯಾಹ್ನ 2ರಿಂದ ಸಂಜೆ 6ರ ವರೆಗೆ ಪ್ರದರ್ಶನ ವೀಕ್ಷಿಸಲು ಅವಕಾಶವಿದೆ.
ಕಾವಿ ಕಲಾವಿದ ಡಾ. ಜನಾರ್ದನ ರಾವ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಕಲಾ ಗುರುಗಳಿಗೆ ಭಾವಪೂರ್ಣ ಸನ್ಮಾನ
ಕಲಾಭೀಷ್ಮ ದಿ. ಕೆ.ಎಲ್. ಭಟ್ ಅವರಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಹಳೆಯ ಕಲಾ ವಿದ್ಯಾರ್ಥಿಗಳು ತಮ್ಮ ಕಲಾಗುರುಗಳನ್ನು ಭಾವಪೂರ್ಣವಾಗಿ ಸನ್ಮಾನಿಸಿದರು. ವಿಶ್ವನಾಥ ಎ.ಎಸ್., ಡಾ. ನಿರಂಜನ ಯು.ಸಿ., ಡಾ. ಭಾರತಿ ಮರವಂತೆ, ಬಸವರಾಜ ಕುತ್ನಿ, ಮಹೇಶ ಉಮತಾರ್, ಗಣೇಶ ಮಂದಾರ, ಸುಮಂಗಲ, ಮುರಳೀಕೃಷ್ಣ ರಾವ್ ಅವರನ್ನು ಗೌರವಿಸಲಾಯಿತು. ಕಾಂತಿ ನವೀನ್ ಪ್ರಭು ಸನ್ಮಾನ ಪತ್ರ ವಾಚಿಸಿದರು.
ಉತ್ತಮವಾಗಿ ಕಲಿಸುವ ಪದ್ಧತಿಯಿಂದ ಮಾತ್ರ ಓರ್ವ ಗುರು ಶ್ರೇಷ್ಠರಾಗುವುದಿಲ್ಲ. ಆ ಗುರುವಿನ ಖ್ಯಾತಿ ಹೆಚ್ಚಲು ಉತ್ತಮ ಶಿಷ್ಯಂದಿರೂ ದೊರಕಬೇಕಾಗುತ್ತದೆ. ಈ ಎಲ್ಲ ಹಳೆಯ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿಯೇ ನಾಳಿನ ಭರವಸೆಯುಳ್ಳ ಕಲಾವಿದರಾಗುವ ಎಲ್ಲ ಲಕ್ಷಣ ಇರುವುದನ್ನು ಅಂದು ಕಂಡಿದ್ದೆ. ಅದಿಂದು ನಿಜವಾಗಿದೆ. ಕಲಾ ಪ್ರದರ್ಶನದ ಮೂಲಕ ಗುರುವಿಗೆ ನಮನ ಸಲ್ಲಿಸಿರುವುದು ಗುರು-ಶಿಷ್ಯರ ಬಾಂಧವ್ಯಕ್ಕೆ ಉತ್ತಮ ನಿದರ್ಶನ.
| ವಿಶ್ವೇಶ್ವರ ಪರ್ಕಳ. ಕಲಾಶಾಲೆಯ ಮಾಜಿ ಪ್ರಾಂಶುಪಾಲ.