ಮಡಿಕೇರಿ:
ತೀರ್ಥ ಕ್ಷೇತ್ರ ಭಾಗಮಂಡಲದ ಸಂಗಮದಲ್ಲಿ ದಿನದಿಂದ ದಿನಕ್ಕೆ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ನದಿ ದಂಡೆಯ ಪಿಂಡ ಪ್ರದಾನ ಸ್ಥಳದಲ್ಲಿ ಹಳೆಯ ಬಟ್ಟೆಗಳು ಸೇರಿದಂತೆ ತ್ಯಾಜ್ಯ ಎಸೆಯುವ ಕೆಟ್ಟ ಚಾಳಿ ಕಂಡುಬರುತ್ತಿದ್ದು, ಪ್ರತಿನಿತ್ಯ ಸ್ವಚ್ಛ ಮಾಡುವುದರಲ್ಲೇ ದೇವಾಲಯ ಸಿಬ್ಬಂದಿ ಸುಸ್ತಾಗುತ್ತಿದೆ. ಕೆಲವರ ಬೇಜವಾಬ್ದಾರಿತನದ ವರ್ತನೆಯಿಂದ ಪವಿತ್ರ ತಾಣ ಅಪವಿತ್ರವಾಗುತ್ತಿರುವ ಬಗ್ಗೆ ಭಕ್ತರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಮತ್ತು ನದಿಯ ದಂಡೆ ಮೇಲೆ ರಾಶಿ ರಾಶಿ ಹಳೆಯ ಬಟ್ಟೆ ಕಂಡುಬರುವುದು ಸಾಮಾನ್ಯ. ಇಂಥದ್ದೇ ಸ್ಥಿತಿ ಈಗ ಕೊಡಗಿನ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾಗಿರುವ ಭಾಗಮಂಡಲದಲ್ಲೂ ನಿರ್ಮಾಣವಾಗಿದೆ. ಜೀವನದಿ ಕಾವೇರಿ ಉಗಮಸ್ಥಾನದಲ್ಲೇ ಮಲೀನವಾಗುತ್ತಿದ್ದಾಳೆ ಎನ್ನುವ ವರದಿಗಳಿಗೆ ಪೂರಕವಾಗಿ ತ್ರಿವೇಣಿ ಸಂಗಮದ ಆಸುಪಾಸಿನಲ್ಲಿ ಹಳೆಯ ಬಟ್ಟೆಗಳು, ಬಳಸಿ ಎಸೆದ ಸ್ಯಾನಿಟರಿ ಪ್ಯಾಡ್‌ಗಳು, ಪುಟ್ಟ ಮಕ್ಕಳ ಪ್ಯಾಂಪರ್ಸ್ಗಳನ್ನು ಚೆಲ್ಲಾಡಿರುವುದು ಸಾಮಾನ್ಯ ದೃಶ್ಯವಾಗಿದೆ.
ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳು ಸಂಗಮವಾಗುವ ಮೂಲಕ ಭಕ್ತರ ನಂಬಿಕೆಯ ತಾಣವಾಗಿರುವ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಪ್ರತಿನಿತ್ಯ ತೀರ್ಥ ಸ್ನಾನ, ಪಿಂಡ ಪ್ರದಾನ, ತಿಲಹೋಮ ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತದೆ. ಕ್ಷೇತ್ರದಲ್ಲಿ ಭಕ್ತಿಯ ವಾತಾವರಣ ಇರಬೇಕಾದರೆ ಸ್ವಚ್ಛತೆಯ ಅಗತ್ಯತೆಯೂ ಇದೆ. ಆದರೆ ಇಲ್ಲಿಗೆ ಭೇಟಿ ನೀಡುವ ಕೆಲವರ ಬೇಜವಾಬ್ದಾರಿತನದ ವರ್ತನೆಯಿಂದಾಗಿ ತ್ರಿವೇಣಿ ಸಂಗಮದಲ್ಲಿ ಶುಚಿತ್ವ ಮಾಯವಾಗಿದ್ದು, ಪಾವಿತ್ರö್ಯತೆಗೆ ಧಕ್ಕೆ ಆಗಿರುವ ಭಾವನೆ ಭಕ್ತರಲ್ಲಿ ಮೂಡುವಂತಿದೆ.
ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ಸಮಿತಿಯ ಸಿಬ್ಬಂದಿ ತ್ರಿವೇಣಿ ಸಂಗಮದಲ್ಲೇ ಬೀಡು ಬಿಟ್ಟಿರುತ್ತಾರೆ. ಭಕ್ತರಲ್ಲಿ ಜಾಗೃತಿ ಮೂಡಿಸುವ, ಹಳೆಯ ಬಟ್ಟೆಗಳನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವುದರ ವಿರುದ್ಧ ಎಚ್ಚರಿಸುವ ಕೆಲಸವನ್ನು ಆಗಾಗ್ಗೆ ಮಾಡುತ್ತಿರುತ್ತಾರೆ. ಎಸೆದ ಬಟ್ಟೆ ಇತ್ಯಾದಿ ತ್ಯಾಜ್ಯಗಳನ್ನು ಆರಿಸಿ ಸಂಗ್ರಹಿಸುವ ಕೆಲಸವೂ ನಡೆಯುತ್ತಿರುತ್ತದೆ. ಆದರೂ ಮತ್ತೆ ಮತ್ತೆ ಅಲ್ಲಲ್ಲಿ ಹಳೆಯ ಬಟ್ಟೆಗಳ ರಾಶಿ ಕಂಡುಬರುತ್ತಿರುವದು ಬೇಜವಾಬ್ದಾರಿತನದ ಪರಮಾವಧಿ ಆಗಿದೆ ಎನ್ನುತ್ತಾರೆ ಪ್ರಜ್ಞಾವಂತರು.
ಕೆಲವು ಭಕ್ತರಲ್ಲಿ ಇನ್ನೂ ಮನೆ ಮಾಡಿಕೊಂಡಿರುವ ಮೂಢನಂಬಿಕೆಯಿAದಲೂ ಇಲ್ಲಿ ಇಂತ ಕೃತ್ಯಗಳು ಪುನರಾವರ್ತನೆ ಆಗುತ್ತಿದೆ. 'ನದಿಗೆ ಹಳೆಯ ಬಟ್ಟೆಗಳನ್ನು ಎಸೆದರೆ ಅದರ ಜತೆಗೆ ಪಾಪವೂ ಹೊರಟು ಹೋಗುತ್ತದೆ', 'ಪುಣ್ಯಕ್ಷೇತ್ರಕ್ಕೆ ತೆರಳಿದಾಗ ಅಲ್ಲಿ ಏನನ್ನಾದರೂ ಬಿಟ್ಟು ಬರಬೇಕು,'... ಈ ರೀತಿಯ ಮೂಢನಂಬಿಕೆಗಳಿAದಾಗಿಯೇ ನದಿ ಮತ್ತು ನದಿ ದಡದಲ್ಲಿ ಹಳೆಯ ಬಟ್ಟೆಗಳ ರಾಶಿ ಬೆಳೆಯಲು ಕಾರಣವಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಹಳೆಯ ಬಟ್ಟೆಗಳನ್ನು ದೊಡ್ಡ ರಾಶಿ ಸಂಗ್ರಹದAತೆ ಧರ್ಮಸ್ಥಳ ರೀತಿಯ ಗಂಭೀರ ಪರಿಸ್ಥಿತಿ ಭಾಗಮಂಡಲದಲ್ಲಿ ಸದ್ಯಕ್ಕೆ ನಿರ್ಮಾಣ ಆಗಿಲ್ಲ. ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆಯಿAದಾಗಿ ಸದ್ಯದಲ್ಲೇ ಇಂಥ ವಾತಾವರಣ ಇಲ್ಲೂ ಕಂಡು ಬಂದರೆ ಅಚ್ಚರಿ ಇಲ್ಲ ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯರು. ಯಾರಾದರೂ ಹಳೆಯ ಬಟ್ಟೆಗಳನ್ನು ನದಿಗೆ ಅಥವಾ ನದಿಯ ಆಸುಪಾಸಿನಲ್ಲಿ ಎಸೆದರೆ ಅವರಿಗೆ ಎಚ್ಚರಿಕೆ ನೀಡುವುದರ ಜತೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಸ್ಥಳೀಯರೂ ಮಾಡುತ್ತಿದ್ದಾರೆ.
ಹಳೆಯ ಬಟ್ಟೆಗಳನ್ನು ಎಸೆಯುವವರಿಗೆ ಎಚ್ಚರಿಕೆ ನೀಡುವ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾತ್ರ ಸದ್ಯಕ್ಕೆ ಇಲ್ಲಿ ನಡೆಯುತ್ತಿದೆ. ಆದರೆ ಇದು ಬೇಜವಾಬ್ದಾರಿ ವರ್ತನೆ ತೋರಿಸುವವರ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎನ್ನುವುದು ಕ್ಷೇತ್ರದ ಪ್ರಸ್ತುತ ಸ್ಥಿತಿ ಗಮನಿಸುತ್ತಿರುವವರ ಅರಿವಿಗೆ ಬರುತ್ತಿದೆ. ಹಾಗಾಗಿ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ಸಮಿತಿ ಇನ್ನೊಂದಿಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಳೆಯ ಬಟ್ಟೆ ಸೇರಿದಂತೆ ತ್ಯಾಜ್ಯ ಎಸೆಯುವುದು ಕಂಡು ಬಂದರೆ ಸ್ಥಳದಲ್ಲೆ ದಂಡ ವಿಧಿಸುವುದು ಮಾತ್ರವಲ್ಲದೆ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಂಡರೆ ಇಂಥ ಕೃತ್ಯಗಳು ಪುನರಾವರ್ತನೆ ಆಗುವುದಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಪುಣ್ಯ ಕ್ಷೇತ್ರ ಭಾಗಮಂಡಲಕ್ಕೆ ಪತ್ರಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಜನ್ಮ ಜನ್ಮಾಂತರದ ಪಾಪಗಳು ಪರಿಹಾರ ಆಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ತ್ರಿವೇಣಿ ಸಂಗಮದ ನದಿ ದಡದಲ್ಲಿ ಮಾಲಿನ್ಯ ಕಂಡುಬರುತ್ತಿದೆ. ಈಚೆಗೆ ಭೇಟಿ ನೀಡಿದಾಗ ಅಲ್ಲಿ ರಾಶಿ ರಾಶಿ ಹಳೆಯ ಬಟ್ಟೆಗಳು, ಇತರ ತ್ಯಾಜ್ಯಗಳು ಇದ್ದವು. ಪಾಪ ಪರಿಹಾರ ಆಗುವ ಬದಲು ಕಾಯಿಲೆಗಳು ಅಂಟಿಕೊಳ್ಳುವ ಭೀತಿ ಕಾಣಿಸಿಕೊಳ್ಳುತ್ತಿದೆ.
ಪ್ರಶಾಂತ್, ಕುಶಾಲನಗರ ನಿವಾಸಿ
ತ್ರಿವೇಣಿ ಸಂಗಮವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಸಿಬ್ಬಂದಿ ಅಲ್ಲಿ ನಿಯೋಜಿಸಲಾಗಿದ್ದು, ತ್ಯಾಜ್ಯ ಎಸೆಯುವರ ಮೇಲೆ ನಿಗಾ ಇಟ್ಟಿರುತ್ತಾರೆ. ಆಗಾಗ್ಗೆ ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡಲಾಗುತ್ತಿರುತ್ತದೆ. ಕ್ಷೇತ್ರದ ಸ್ವಚ್ಛತೆಗೆ ಆದ್ಯತೆ ಕೊಡಲಾಗಿದೆ. ಪುಣ್ಯಕ್ಷೇತ್ರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಇಲ್ಲಿಗೆ ಆಗಮಿಸುವ ಭಕ್ತರ ಮೇಲೂ ಇರುತ್ತದೆ.
ಚಂದ್ರಶೇಖರ್ ಎನ್.ಜಿ., ಕಾರ್ಯ ನಿರ್ವಾಹಕ ಅಧಿಕಾರಿ, ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ
ಪವಿತ್ರ ಕ್ಷೇತ್ರವನ್ನು ಅಪವಿತ್ರ ಮಾಡುವರಿಗೆ ಎಚ್ಚರಿಕೆ ಮಾತ್ರ ಕೊಟ್ಟರೆ ಸಾಲದು. ಅಂಥವರು ಈ ಕೆಲಸ ಪುನರಾವರ್ತನೆ ಮಾಡಬಾರದು. ಹಾಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ದೊಡ್ಡ ಮಟ್ಟದ ದಂಡ ವಿಧಿಸಬೇಕು. ಇಂಥವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು.
ತೇಜಾಸತೀಶ್, ಮುಕ್ಕೋಡ್ಲು
ತ್ರಿವೇಣಿ ಸಂಗಮಕ್ಕೆ ಇಳಿಯಲು ಭಕ್ತರು ಕಷ್ಟಪಡುತ್ತಾರೆ. ಕೆಸರು ಇರುವುದರಿಂದ ಹಲವು ಹಿರಿಯ ಭಕ್ತರು ಜಾರಿ ಬಿದ್ದಿದ್ದಾರೆ. ಮರಳು ಚೀಲಗಳನ್ನು ಹಾಕಿ ಭಕ್ತರಿಗೆ ಅನುಕೂಲ ಮಾಡಿಕೊಡುವಂತೆ ಅಲ್ಲಿನ ಸಿಬ್ಬಂದಿಗೆ ಸಲಹೆ ನೀಡಿದ್ದೆ. ಪ್ರವಾಸಿಗರಿಂದ ತುಂಬಿರುವ ತಲಕಾವೇರಿಯಲ್ಲಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ. ಪ್ರವಾಸಿಗರನ್ನು ನಿಯಂತ್ರಿಸಲು ತಲಕಾವೇರಿಗೆ ಹೆಚ್ಚಿನ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ತಲಕಾವೇರಿ - ಭಾಗಮಂಡಲವನ್ನು ಯಾತ್ರಾ ಸ್ಥಳ ಎಂದು ಘೋಷಿಸಿದಾಗ ಮಾತ್ರ ಪರಿಸ್ಥಿತಿ ನಿಯಂತ್ರಣಕ್ಕೆ ತರಬಹುದು.
ಡಾ. ಸಣ್ಣುವಂಡ ಕಾವೇರಪ್ಪ, ಮಾಜಿ ಸದಸ್ಯ, ಶ್ರೀ ತಲಕಾವೇರಿ, ಭಾಗಮಂಡಲ ದೇವಾಲಯ ಸಮಿತಿ