ಜಿಲ್ಲೆ

ಸಾಲಕ್ಕೆ ಬೆಳೆ ಸಮೀಕ್ಷೆ ಕಡ್ಡಾಯ ಬೇಡ : ಸಂಗಬೆಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹ

ಸೌಮ್ಯ ಆರ್

ಬಂಟ್ವಾಳ: ಬೆಳೆ ಸಮೀಕ್ಷೆ ಮಾಡದ ರೈತರನ್ನು ಬೆಳೆ ವಿಮೆ ಹಾಗೂ ಇನ್ನಿತರ ಕೃಷಿ ಸಾಲಗಳಿಗೆ ಪರಿಗಣಿಸಲು ಸಾಧ್ಯವಿಲ್ಲ ಎಂಬ ಸರ್ಕಾರದ ಆದೇಶದ ಕುರಿತು ಸಂಗಬೆಟ್ಟು ಗ್ರಾಮ ಪಂಚಾಯಿತಿಯ ಪ್ರಥಮ ಹಂತದ ಗ್ರಾಮಸಭೆಯಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ, ಹವಾಮಾನ ಆಧಾರಿತ ಬೆಳೆ ವಿಮೆ ಸೇರಿದಂತೆ ಕೃಷಿ ಸಾಲಗಳಿಗೆ ಸಂಬಂಧಿಸಿ, ಬೆಳೆ ಸಮೀಕ್ಷೆಯನ್ನು ರೈತರು ಕಡ್ಡಾಯವಾಗಿ ಮಾಡಬೇಕು ಅಥವಾ ಖಾಸಗಿ ಏಜೆನ್ಸಿ ಮೂಲಕ ಮಾಡಿಸಬೇಕು. ಸರ್ಕಾರದ ಈ ರೀತಿಯ ಅಸಮರ್ಪಕ ನೀತಿಯಿಂದಾಗಿ ಬೆಳೆ ವಿಮೆ ಯೋಜನೆಗೆ ಪ್ರೀಮಿಯಂ ಕಟ್ಟಲಾಗದೆ ಕರಾವಳಿ ಜಿಲ್ಲೆಗಳಲ್ಲಿ ಸಾವಿರಾರು ಅಡಕೆ ಬೆಳೆಯುವ ರೈತರು ಬೆಳೆ ವಿಮೆ ಯೋಜನೆ ಪ್ರಯೋಜನದಿಂದ ವಂಚಿತರಾಗಿದ್ದಾರೆ ಎಂದರು.

ಬಂಟ್ವಾಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. 15ನೇ ಹಣಕಾಸು ಯೋಜನೆ ಕ್ರಿಯಾಯೋಜನೆಯ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡಿ ಪ್ರಗತಿ ಸಾಧಿಸಲು ಸಲಹೆ-ಸೂಚನೆ ನೀಡಿದರು.

ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಪಿಡಿಒ ಪದ್ಮ ನಾಯ್ಕ ವರದಿ ಮಂಡಿಸಿದರು. ನೌಕರ ಮಹಾಬಲ ನಾಯ್ಕ ಜಮಾ-ಖರ್ಚು ವಿವರ ಮಂಡಿಸಿದರು.

ಪಂಚಾಯಿತಿ ಅಧ್ಯಕ್ಷೆ ರಾಜೀವಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಸುರೇಶ್ ಕುಲಾಲ್, ಸದಸ್ಯರಾದ ಸಂದೇಶ ಶೆಟ್ಟಿ, ದಾಮೋದರ ಪೂಜಾರಿ, ಉದಯ ಪೂಜಾರಿ, ದೇವಪ್ಪ ಕರ್ಕೇರ, ಸುನೀಲ್ ಶೆಟ್ಟಿಗಾರ್, ಶಕುಂತಲಾ, ಶಾಂತಾ, ಬೆನಡಿಕ್ಟ ಡಿಕೊಸ್ತಾ, ಪ್ರೇಮಾ, ಹೇಮಾಲತಾ, ಪಂಚಾಯತ್‌ರಾಜ್ ಇಂಜಿನಿಯರ್ ಕೃಷ್ಣ ಉಪಸ್ಥಿತರಿದ್ದರು. ಕಾರ್ಯದರ್ಶಿ ರೋಹಿಣಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಕನಿಷ್ಠ 10 ವರ್ಷಗಳವರೆಗೂ ಊರ್ಜಿತ

ಮುಂದಕ್ಕೆ ಬೆಳೆ ವಿಮೆ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯದಿಂದ ವಿನಾಯಿತಿ ನೀಡಬೇಕು. ಅಡಕೆ ಬೆಳೆಗೆ ಸಂಬಂಧಪಟ್ಟಂತೆ ಒಮ್ಮೆ ಬೆಳೆ ಸಮೀಕ್ಷೆ ಮಾಡಿದರೆ ನಂತರ ಕನಿಷ್ಠ 10 ವರ್ಷಗಳವರೆಗೂ ಅದೇ ಬೆಳೆ ಸಮೀಕ್ಷೆ ಆಧಾರದಲ್ಲಿ ಬೆಳೆ ವಿಮೆ ಸೇರಿದಂತೆ ಇನ್ನಿತರ ಕೃಷಿ ಸಾಲಗಳಿಗೆ ಪಹಣಿ ಪತ್ರಿಕೆ ಪರಿಶೀಲಿಸಿ ಪರಿಗಣಿಸಬೇಕು. ಇದನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಪ್ರಭಾಕರ ಪ್ರಭು ಒತ್ತಾಯಿಸಿದರು. ಗ್ರಾಪಂ ಅಧ್ಯಕ್ಷೆ ರಾಜೀವಿ ಪೂಜಾರಿ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲು ನಿರ್ಣಯಿಸಲಾಗುವುದು ಎಂದರು.