ಶಿವಮೊಗ್ಗ: ಕರೊನಾದ ಎರಡು ವರ್ಷದಲ್ಲಿ ಕನ್ನಡದ ಐದು ನಾಟಕಗಳನ್ನು ಹಿಂದಿ ಭಾಷೆಗೆ ಅನುವಾದಿಸಿ ನಮ್ಮ ಕಲಾವಿದ (ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ)ರು ಇಡೀ ಭಾರತ ಸಂಚರಿಸುತ್ತಿರುವುದು ದಾಖಲೆಯಾಗಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಹೊಂಗಿರಣ ಸಂಸ್ಥೆಯಿಂದ ನೀನಲ್ಲದೆ ಮತ್ತಾರು ಇಲ್ಲವಯ್ಯ(ತುಮ್ಹಾರೆ ಸಿವಾ ಔರ್ ಕೋಯಿ ನಹಿ) ಶೀರ್ಷಿಕೆಯಡಿ ಬಸವಣ್ಣನ 44 ವಚನಗಳ ನೃತ್ಯರೂಪಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ನಡೆಸಿದ ಶಿವಶರಣರ ವಚನಗಳನ್ನು ಸಂರಕ್ಷಿಸಿ ಅದನ್ನು ಜನರ ಬಳಿಗೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ನೃತ್ಯರೂಪಕ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
2019ರಲ್ಲಿ ಸಂಘದ 100 ಮಕ್ಕಳು ಬಾಂಬೆಯಲ್ಲಿ ಅಭಿನಯಿಸಿದ್ದರು. ಅದಾದ ಬಳಿಕ ಈ ನಾಟಕ ಹಿಂದಿಯಲ್ಲಿ ಮೂಡಿ ಬಂದಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ಕೆಲವರಿಂದ ಬಂದಿತ್ತು. ಕರೊನಾ ಕಾರಣದಿಂದ ಎರಡು ವರ್ಷ ವಿಳಂಬವಾಗಿತ್ತು. ಅದಾದ ಬಳಿಕ ಐದು ನಾಟಕಗಳನ್ನು ಹಿಂದಿಗೆ ಭಾಷಾಂತರಿಸಿ ನೃತ್ಯರೂಪಕ ರಚಿಸಲಾಗಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು. ಎಂಎಲ್‌ಸಿ ಎಸ್.ರುದ್ರೇಗೌಡ, ವೀರಶೈವ ಸಮಾಜದ ಪ್ರಮುಖರಾದ ಎಸ್‌ಎಸ್.ಜ್ಯೋತಿಪ್ರಕಾಶ್, ಎಸ್.ಪಿ.ದಿನೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ರಂಗಕರ್ಮಿ ಡಾ. ಸಾಸ್ವೆಹಳ್ಳಿ ಸತೀಶ್ ಇದ್ದರು.
ತರಳಬಾಳು ಶಾಖಾಮಠ ಸಾಣೇಹಳ್ಳಿ ಪೀಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ 24 ಕಲಾವಿದೆಯರು ಈ ನೃತ್ಯರೂಪಕದಲ್ಲಿ ಪಾಲ್ಗೊಂಡಿದ್ದರು. ರಂಗ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಪರಿಕಲ್ಪನೆಯಲ್ಲಿ ಮೂಡಿಬಂದಿದ್ದು ಸಿ.ಅಶ್ವತ್ಥ್ ಸಂಗೀತ ನೀಡಿದರು. ಒಟ್ಟಾರೆ ನೀನಲ್ಲದೆ ಮತ್ತಾರು ಇಲ್ಲವಯ್ಯ ನೃತ್ಯ ರೂಪಕ ಸಭೀಕರ ಮನಸೂರೆಗೊಂಡಿತು.