ಸಂಡೂರು: ನಾಡೋಜ ಡಾ.ವಿ.ಟಿ.ಕಾಳೆ ಅವರು ಒಬ್ಬ ಚಿತ್ರಕಲಾವಿದರಾಗಿದ್ದರೂ ಸಾಹಿತ್ಯ ಕ್ಷೇತ್ರದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ಹೇಳಿದರು.
ಪಟ್ಟಣ ಕಾಳೆ ಅವರ ಮನೆಯಲ್ಲಿ ಕಸಾಪ ತಾಲೂಕು ಘಟಕ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಹನೀಯರು ಎಂಬ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಸಂಡೂರಿನಲ್ಲಿ 50-60ವರ್ಷದಿಂದ ಕಲಾಸೇವೆ ಮಾಡುತ್ತಿರುವ ವಿ.ಟಿ.ಕಾಳೆ ಅವರು ರಚಿಸಿದ ಬಸವಣ್ಣ, ಅಕ್ಕಮಹಾದೇವಿ ಸೇರಿ ಇತರ ಶರಣರ ಚಿತ್ರಗಳು ನಾಡಿನ ಅನೇಕ ಮಠಗಳಲ್ಲಿ ಸ್ಥಾನ ಪಡೆದಿವೆ. ಅಲ್ಲದೆ ಸಾಹಿತ್ಯದ ಕಡೆಯೂ ಆಸಕ್ತಿ ಹೊಂದಿದ್ದು, ಅನೇಕ ಕೃತಿಗಳು, ನಾಟಕಗಳನ್ನು ರಚಿಸಿ ಛಾಪು ಮೂಡಿಸಿದ್ದಾರೆ. ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ವಿ.ಟಿ.ಕಾಳೆ ಮಾತನಾಡಿ, ಬಾಗಲಕೋಟೆ ಜಿಲ್ಲೆ ಹುನಗುಂದದವನಾದರೂ ಗದಗಿನ ವಿಜಯ ಕಲಾಮಂದಿರದಲ್ಲಿ ಕಲಾ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದೆ. 1964ರಲ್ಲಿ ಸಂಡೂರಿನ ಎಸ್‌ಆರ್‌ಎಸ್, ಛತ್ರಪತಿ ಶಾಲೆಗಳೆರಡರಲ್ಲೂ ಅಧ್ಯಾಪಕ ವೃತ್ತಿ ಆರಂಭಿಸಿದೆ. ನಿವೃತ್ತಿ ನಂತರವೂ ಚಿತ್ರಕಲಾ ವೃತ್ತಿ ಮುಂದುವರೆಸಿರುವೆ ಎಂದರು.
ಉಪನ್ಯಾಸಕ ಕೆ.ತಿಪ್ಪೇರುದ್ರಪ್ಪ ಪ್ರಶ್ನೆಗಳಿಗೆ ಡಾ.ವಿ.ಟಿ.ಕಾಳೆ ಉತ್ತರಿಸಿದರು. ಮಾಜಿ ಕಸಾಪ ಅಧ್ಯಕ್ಷ ಬಸವರಾಜ ಮಸೂತಿ, ಬೀನಾ ಕಾಳೆ ಮಾತನಾಡಿದರು. ಪತ್ನಿ ಕಾಶಿಬಾಯಿ ಕಾಳೆ, ಕಸಾಪ ಗೌರವ ಕಾರ್ಯದರ್ಶಿ ಗಾಣಿಗರ ವೀರೇಶ್, ಗೌರವ ಕೋಶಾಧ್ಯಕ್ಷ ಎಂ.ಟಿ.ರಾಥೋಡ್, ಎಚ್.ಎನ್.ಬೋಸ್ಲೆ, ಕಾರ್ತಿಕ್ ಕಾಳೆ, ಹಗರಿ ಬಸವರಾಜಪ್ಪ, ನಾಗರಾಜ ಇತರರಿದ್ದರು.