ಸಂಡೂರಿನಲ್ಲಿ ಡಾ.ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಿಸಲು ಸ್ಥಳ ನಿಗದಿಪಡಿಸಬೇಕೆಂದು ಒತ್ತಾಯಿಸಿ ಸ್ಥಳೀಯ ಪುನೀತ್ ರಾಜ್‌ಕುಮಾರ್ ಸೇವಾ ಸಮಿತಿ ಪದಾಧಿಕಾರಿಗಳು, ಅಭಿಮಾನಿಗಳು ಮೆರವಣಿಗೆಯೊಂದಿಗೆ ಪುರಸಭೆಗೆ ತೆರಳಿದರು.  
ಜಿಲ್ಲೆ

ಪುನೀತ್ ರಾಜ್‌ಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಿ: ಪುರಸಭೆ ಮುಖ್ಯಾಧಿಕಾರಿಗೆ ಅಭಿಮಾನಿಗಳ ಮನವಿ

ಸಂಡೂರು: ಪಟ್ಟಣದಲ್ಲಿ ಡಾ.ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಿಸಲು ಸ್ಥಳ ನಿಗದಿಪಡಿಸಬೇಕು ಎಂದು ಪುನೀತ್ ರಾಜ್‌ಕುಮಾರ್ ಸೇವಾ ಸಮಿತಿ ಪುರಸಭೆ ಮುಖ್ಯಾಧಿಕಾರಿ ಎಂ.ಖಾಜಾ ಮೋಯಿನುದ್ದೀನ್‌ಗೆ ಮಂಗಳವಾರ ಮನವಿಪತ್ರ ಸಲ್ಲಿಸಿದರು.

ಪುನೀತ್ ರಾಜ್‌ಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ನಿಗದಿ ಪಡಿಸಲು ಮೀನ ಮೇಷ ಎಣಿಸಲಾಗುತ್ತಿದ್ದು ಕಾಣವೇನೆಂದು ಸೇವಾ ಸಮಿತಿ ಪದಾಧಿಕಾರಿಗಳು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಕೂಡಲೇ ಸ್ಥಳ ನಿಗದಿ ಪಡಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಡಾ.ಪುನೀತ್ ರಾಜಕುಮಾರ್ ಸೇವಾ ಸಮಿತಿ ಮುಖಂಡರಾದ ರಮೇಶ್ ಧರ್ಮಾಪುರ, ಬಾಳೆಕಾಯಿ ಮಂಜುನಾಥ, ಕೋಟ್ರೇಶಿ, ನಾಗರಾಜ್, ಶಿವಕಂಠ ಭಂಡಾರಿ, ಮಹೇಶ್, ರಾಜೇಶ್ ಹೆಗಡೆ, ಕಾರ್ತಿಕ್, ರೇವಣ್ಣ, ನಾಸಿರ್, ವಂಶಿ, ತಬಲ ಕುಮಾರಸ್ವಾಮಿ, ರೈತಪರ ಸಂಘಟನೆಯ ಮುಖಂಡರಾದ ಎಂಎಲ್‌ಕೆ.ನಾಯ್ಡು, ಉಜ್ಜಿನಪ್ಪ ಇತರರಿದ್ದರು.

ಮೆರವಣಿಗೆ: ಮನವಿಗೂ ಮುನ್ನ ಡಾ.ಪುನೀತ್ ರಾಜ್‌ಕುಮಾರ್ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಅಭಿಮಾನಿಗಳ ಬಳಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರದೊಂದಿಗೆ ಮೆರವಣಿಗೆ ಸಾಗಿ ನಟ ಪುನೀತ್ ಪರ ಘೋಷಣೆಗಳನ್ನು ಕೂಗುತ್ತ ಅಭಿಮಾನಿ ಮೆರೆದರು.