ಸಂಡೂರು: ಬಂಡ್ರಿ ಸಮೀಪದ ಹಿರೇಕೆರೆಯಾಗಿನಹಳ್ಳಿಯಲ್ಲಿ ವಾಂತಿ-ಭೇದಿ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಡಿಎಚ್‌ಒ ಡಾ.ವೈ.ರಮೇಶ್ ಬಾಬು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆರ್‌ಒ ಪ್ಲಾಂಟ್ ಇದ್ದರೂ ಜನರು ಕುಡಿಯಲು ಬಳಸದಿರುವ ಬಗ್ಗೆ ಮಾಹಿತಿ ಪಡೆದ ರಮೇಶಬಾಬು, ಮನೆ ಮನೆಗೆ ಭೇಟಿ ನೀಡಿ ಶುದ್ಧ ಕುಡಿವ ನೀರು ಬಳಸಬೇಕು. ಬಿಸಿ ಆಹಾರ ಸೇವಿಸಬೇಕು. ಕತ್ತರಿಸಿ ಮಾರಾಟಕ್ಕಿಟ್ಟಿರುವ ಹಣ್ಣುಗಳನ್ನು ತಿನ್ನಬಾರದು. ಹೊಲಗಳಿಗೆ ಹೋಗುವಾಗ ಕಾಯಿಸಿದ ನೀರನ್ನೇ ಒಯ್ಯಿರಿ. ಊಟ ಮಾಡುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
ವೈಯಕ್ತಿಕ ಶೌಚಗೃಹ ಬಳಸಬೇಕು ಎಂದು ತಿಳಿಸಿದರು. ಶುದ್ಧ ಕುಡಿವ ನೀರನ್ನು ಕ್ಲೋರಿನೇಷನ್ ಮಾಡಿ ಸರಬರಾಜು ಮಾಡಬೇಕು. ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು ಎಂದು ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು. ಕುಡಿವ ನೀರಿನ ಮೂಲಗಳ ಮಾದರಿ ಸಂಗ್ರಹಿಸಿದ ಮಾಹಿತಿ ಪಡೆದರು.
ಇದನ್ನೂ ಓದಿ: ಮದುವೆ ಊಟ ಸವಿದ ಜನರಿಗೆ ವಾಂತಿ-ಭೇದಿ
ಒಟ್ಟು 29 ವಾಂತಿ-ಭೇದಿ ಪ್ರಕರಣಗಳು ಕಂಡುಬಂದಿವೆ. ಸಮುದಾಯ ಭವನದಲ್ಲಿ ತಾತ್ಕಾಲಿಕ ಕ್ಲಿನಿಕ್ ತೆರದು ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದ್ದು, ಅಗತ್ಯ ಔಷಧ ಪೂರೈಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಕೈಗೊಂಡಿದ್ದು, ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಡಿಎಚ್‌ಒ ತಿಳಿಸಿದರು.
ಹಿರೇಕೆರಯಾಗಿನಹಳ್ಳಿಯ ಎರಡನೇ ವಾರ್ಡ್‌ನಲ್ಲಿ ಮಾತ್ರ ವಾಂತಿ-ಭೇದಿ ಪ್ರಕರಣಗಳು ಪತ್ತೆಯಾಗಿವೆ. ಕುಡಿವ ನೀರಿನ ಪೈಪ್‌ಗಳು ತಿಪ್ಪೆ ಗುಂಡಿಗಳಲ್ಲಿ ಹಾದು ಹೋಗಿರುವ ಕಾರಣ ತಕ್ಷಣ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ.
ಹಿರೇಕೆರೆಯಾಗಿನಹಳ್ಳಿಯಲ್ಲಿ 29 ಪ್ರಕರಣಗಳು ಪತ್ತೆಯಾಗಿವೆ ಆದರಲ್ಲಿ ನಾಲ್ವರು ಸಂಡೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೂಡ್ಲಿಗಿ ಆಸ್ಪತ್ರೆಯಲ್ಲಿ ಐವರು, ವಿಮ್ಸ್‌ನಲ್ಲಿ ಇಬ್ಬರು ಹಾಗೂ ಗ್ರಾಮದ ತಾತ್ಕಾಲಿಕ ಕ್ಲಿನಿಕ್‌ನಲ್ಲಿ 18 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.ಡಾ.ಭರತ್ ಕುಮಾರ್ಪ್ರಭಾರ ಟಿಎಚ್‌ಒ, ಸಂಡೂರು