ಸಂಡೂರು ವಿರಕ್ತಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಶಿವಾನುಭವ ಗೋಷ್ಠಿಯಲ್ಲಿ ಲಾಲ್‌ಗೊಂಡ ಸಮಾಜದ ನಾಯಕಿ ಸೌಭಾಗ್ಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ವಿರಕ್ತಮಠದ ಪ್ರಭು ಸ್ವಾಮೀಜಿ, ಅಕ್ಕನ ಬಳಗದ ಅಧ್ಯಕ್ಷೆ ಗುಡೇಕೋಟೆ ಜ್ಯೋತಿ ನಾಗರಾಜ್, ಕಸಾಪ ಅಧ್ಯಕ್ಷ ಬಿ.ನಾಗನಗೌಡ ಇತರರಿದ್ದರು. 
ಜಿಲ್ಲೆ

ಇಷ್ಟಲಿಂಗ ನಮ್ಮಲ್ಲಿರುವ ಚೈತನ್ಯದ ಕುರುಹು

ಸಂಡೂರು: ಲಾಲ್‌ಗೊಂಡ ಶಬ್ದ ಶರಣಸಂಸ್ಕೃತಿ, ವಚನ ಸಂಸ್ಕೃತಿ ಅಥವಾ ಲಿಂಗಾಯತ ಸಂಸ್ಕೃತಿಯಲ್ಲಿ ಬರುತ್ತದೆ ಎಂದು ಲಾಲ್‌ಗೊಂಡ ಸಮಾಜದ ನಾಯಕಿ ಸೌಭಾಗ್ಯಲಕ್ಷ್ಮೀ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ 378ನೇ ಶಿವಾನುಭವ ಗೋಷ್ಠಿಯಲ್ಲಿ ಇತ್ತೀಚೆಗೆ ಮಾತನಾಡಿದರು.

ಲಾಲ್‌ಗೊಂಡ ಉತ್ಪತ್ತಿಯ ಬಗ್ಗೆ ಸಂಶೋಧಕ ಎಂ.ಎಂ.ಕಲಬುರ್ಗಿ ಅವರು ನಾಡ ಗಾವುಂಡ ಎಂದರೆ ನಾಡಿಗೆ ರಾಜ, ಒಡೆಯನಿದ್ದಂತೆ, ಗೌಡಿಕೆ ಮಾಡುವವರು ಅಥವಾ ಗೌಡ ಎಂಬರ್ಥ ಬರುತ್ತದೆ ಎಂದು ತಿಳಿಸಿದ್ದಾರೆ.

ಸಂಸ್ಕೃತಿ ಎಂದರೆ ಒಂದು ಜನಾಂಗದ ಜೀವನ ಸಂಸ್ಕೃತಿಯ ವಿಧಾನ. ಜತೆಗೆ ಮೌಲ್ಯಗಳು, ಆಚರಣೆಗಳು ಹಾಗೂ ಜ್ಞಾನವನ್ನು ಒಟ್ಟಾಗಿ ನೋಡುವುದಾಗಿದೆ. ಗೊಂಡ ಎಂದರೆ ಕುರುಬರು ಎಂದರ್ಥ ಎಂದರು.

ಲಿಂಗಾಯತ ಸಮುದಾಯಗಳ ತಿಳಿವಳಿಕೆ ಮತ್ತು ಒಗ್ಗಟ್ಟಿನ ಕೊರತೆಯಿಂದ ಬೇರೆಯವರು ನಮ್ಮನ್ನು ಆಟವಾಡಿಸುತ್ತಿದ್ದಾರೆ. ಲಿಂಗಾಯತ ಸಮುದಾಯ 12ನೇ ಶತಮಾನದ ಶರಣ ಸಂಸ್ಕೃತಿಯಿಂದ ವೈಜ್ಞಾನಿಕ ತಳಹದಿ ಮೇಲೆ ರೂಪುಗೊಂಡಿದೆ.

ವಚನ ಸಾಹಿತ್ಯದ ಪರಿಕಲ್ಪನೆಯಲ್ಲಿ ನೋಡುವುದಾದರೆ ಲಿಂಗಾಯತದಲ್ಲಿ ಬಣಜಿಗರು, ಪಂಚಮಸಾಲಿ, ಲಾಲ್‌ಗೊಂಡ, ಗಾಣಿಗ ಹೀಗೆ ಬೇರೆ-ಬೇರೆ ಒಳಪಂಗಡಗಳು ಇವೆ. 12ನೇ ಶತಮಾನದಲ್ಲಿ ದೇವಾಲಯಗಳು, ಅಧಿಕಾರಿಗಳು, ರಾಜರೆಲ್ಲ ದುಡಿಯುವ ವರ್ಗವನ್ನು ಶೋಷಣೆ ಮಾಡುವವರಾಗಿದ್ದರು.

ಆಗ ಬಸವಾದಿ ಶರಣರು ಇದನ್ನು ಧಿಕ್ಕರಿಸಿ ನಿಂತರು. ಇಷ್ಟಲಿಂಗ ನಿರಾಕಾರ ಸ್ವರೂಪ ಎಂದು ಇಷ್ಟಲಿಂಗ ನಮ್ಮಲ್ಲಿರುವ ಚೈತನ್ಯದ ಕುರುಹು ಎಂದರು.

ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ಮಾತನಾಡಿ, ಕಾಣದ ದೇವರಿಗಿಂತ ಕಣ್ಣಿಗೆ ಕಾಣುವ ಗುರು ಶ್ರೇಷ್ಠ ಎನ್ನುತ್ತೇವೆ ಎಂದರು.

ನರಿ ಬಸವರಾಜ ಸಂಗೀತ ಸೇವೆ ಸಲ್ಲಿಸಿದರು. ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿದರು. ಲಾಲ್‌ಗೊಂಡ ಸಮಾಜದ ಅಧ್ಯಕ್ಷ ಮಂಜುನಾಥ, ಹಿರಿಯ ವಕೀಲರಾದ ಗುಡೆಕೋಟೆ ನಾಗರಾಜ, ಟಿ.ಎಂ.ಶಿವಕುಮಾರ್ ಇತರರಿದ್ದರು.