ಸಂಡೂರು: ರಾಜ್ಯ ಸರ್ಕಾರ ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ಹಿಂಪಡೆಯಬೇಕು ಎಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ತಾಲೂಕಾಧ್ಯಕ್ಷ ವಿ.ದೇವಣ್ಣ ಒತ್ತಾಯಿಸಿದರು.
ಕುರೇಕುಪ್ಪ ಗ್ರಾಮದಲ್ಲಿ ಆ.5ರಂದು ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಹೈಕೋರ್ಟ್ ಆದೇಶದಂತೆ 2021ರ ಅಧಿಸೂಚನೆ ಅನ್ವಯಿಸಿ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು. 2022-23, 24ನೇ ಸಾಲಿನ ಬಾಕಿ ಅರ್ಜಿಗಳಿಗೂ ಧನ ಸಹಾಯ ಪಾವತಿಸಬೇಕು. ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸುವುದು ನಿಲ್ಲಿಸಲಿ. ವಿಳಂಬ ಮಾಡದೆ ಕಾರ್ಡ್ ವಿತರಣೆ ಮಾಡಲಿ. ಸೌಲಭ್ಯಗಳಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳು ವಿಲೇವಾರಿ ಮಾಡಬೇಕಾಗಿದೆ. ಪಿಂಚಣಿದಾರರಿಗೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬೃಹತ್ ಖಾಸಗಿ ಹಾಗೂ ಸಾರ್ವಜನಿಕ ನಿರ್ಮಾಣಗಳಿಗೆ ಶೇ.ಎರಡರಷ್ಟು ಸೆಸ್ ವಿಧಿಸಬೇಕು. ಕಲ್ಯಾಣ ಮಂಡಳಿ ಪುನರಚಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ನೇಮಿಸಿ ಎಂದು ಒತ್ತಾಯಿಸಿದರು. ಸಿಡಬ್ಲುೃಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಕೆ.ದೇವಣ್ಣ, ಗ್ರಾಮ ಘಟಕದ ಅಧ್ಯಕ್ಷ ಕೆ.ಹೊನ್ನೂರಪ್ಪ, ಮುಖಂಡರಾದ ಕೆ.ಹಾಲಸ್ವಾಮಿ, ವಿ.ಹೊನ್ನೂರಪ್ಪ, ಸಣ್ಣಸ್ವಾಮಿ, ಕೆ.ಬಸವರಾಜ್, ಎನ್.ಅಂಬರೀಶ್, ಕೆ.ಸತ್ಯಣ್ಣ, ಕೆ.ಈರಣ್ಣ, ಕೆ.ಶರಣಪ್ಪ, ಪರಶುರಾಮ್, ಕೆ.ರಂಗಮ್ಮ, ಕೆ.ಶರಣಮ್ಮ ಇತರರಿದ್ದರು.