ಸಂಡೂರು: ಈವರೆಗೆ ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದೇ ಇಲ್ಲ. ಅಪರೇಷನ್ ಕಮಲ ಮೂಲಕವೇ ಅಧಿಕಾರ ನಡೆಸಿದೆ. ಆಪರೇಷನ್‌ಗೆ ಬಳಸಿದ ಹಣವೂ ಕಪ್ಪು ಹಣವಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲವಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ಕೃತಜ್ಞತಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬಳ್ಳಾರಿ ಜನರನ್ನು ಭಯದಲ್ಲಿಟ್ಟು ರಿಪಬ್ಲಿಕ್ ಬಳ್ಳಾರಿ ಮಾಡಿದ್ದ ಜನಾರ್ದನರೆಡ್ಡಿಗೆ ಉಪಚುನಾವಣೆ ಉಸ್ತುವಾರಿ ವಹಿಸಲಾಗಿತ್ತು. ಇಲ್ಲೂ ರಿಪಬ್ಲಿಕ್ ಸಂಡೂರು ಮಾಡಲು ಅವರು ಹೊರಟಿದ್ದರು. ಆದರೆ, ಸಂಡೂರಿನ ಜನ ರೆಡ್ಡಿ ಹಣಕ್ಕೆ ಭಯಕ್ಕೆ ಆಮಿಷಕ್ಕೆ, ಸುಳ್ಳುಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಡಾ.ರಾಜಕುಮಾರ್ ಅವರು ಅಭಿಮಾನಿಗಳಿಗೆ ದೇವರು ಅಂದಿರುವಂತೆ ಮತದಾರರೂ ನನಗೆ ದೇವರ ಸಮ ಎಂದರು.
ಈ ಹಿಂದೆ ನರೇಂದ್ರ ಮೋದಿ ಕೊಟ್ಟಿದ್ದ ಭರವಸೆಗಳನ್ನು ನೆನಪಿಸಿಕೊಳ್ಳಿ. ಅವುಗಳಲ್ಲಿ ಒಂದಾದರೂ ಈಡೇರಿದೆಯಾ? ಅಚ್ಛೇ ದಿನ್ ತರಲಿಲ್ಲ, ಉದ್ಯೋಗ ಸೃಷ್ಟಿಸಲಿಲ್ಲ, ಕಪ್ಪು ಹಣ ಬರಲಿಲ್ಲ, ಖಾತೆಗಳಿಗೆ 15 ಲಕ್ಷ ರೂ. ಬೀಳಲಿಲ್ಲ. ಭಾಷಣದಲ್ಲಷ್ಟೇ ಎಲ್ಲ ಮುಗಿಸಿದರು ಎಂದು ವ್ಯಂಗ್ಯವಾಡಿದರು.
ಕಾರ್ಯಕ್ರಮ ದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅಧಿಕಾರ ನಶ್ವರ, ಕಾಂಗ್ರೆಸ್ ಯೋಜನೆಗಳು ಅಜರಾಮರ. ಯಾವುದೇ ಸಾಧನೆ ಮಾಡಿದರೂ ಮತದಾರನೇ ಇಲ್ಲಿ ಈಶ್ವರ, ಟಿಬಿಡ್ಯಾಂನ ಕ್ರೆಸ್ಟ್‌ಗೇಟ್ ಒಡೆದಾಗ ಆಶೋಕ, ಜನಾರ್ದನ ರೆಡ್ಡಿ ಟೀಕಿಸಿದ್ದರು. ಟಿಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತದೆ. ಎಚ್.ಡಿ. ಕುಮಾರಸ್ವಾಮಿ ಮತ್ತು ದೇವೇಗೌಡರು ಚನ್ನಪಟ್ಟಣದಲ್ಲಿ ಏನೆಲ್ಲ ಮಾಡಿದರು. ಆದರೆ, ಜನರು ಗ್ಯಾರಂಟಿಗೆ ಮತ ಹಾಕಿದರು. ಏನಿದ್ದರೂ ಕಮಲ ಕೆರೆಯಲ್ಲಿ, ತೆನೆ ಹೊಲದಲ್ಲಿ ಮತ್ತು ಕೈ ಅಧಿಕಾರದಲ್ಲಿರಬೇಕು. ನಮ್ಮ ಬಲ 138 ಶಾಸಕರು ಆಗುತ್ತಾರೆ. ಗೌರಿ ಬಿದನೂರು, ಹರಪನಹಳ್ಳಿ ರೆಬಲ್ ಕ್ಯಾಂಡೇಟ್ ನಮ್ಮ ಜತೆಗೆ ಇದ್ದಾರೆ. ಎಂದರು.
ಭಾಷಣ ವೇಳೆ ಸಿಎಂ ಸಿದ್ದರಾಮಯ್ಯ ಅವರು ಬಳ್ಳಾರಿಯನ್ನು ಜನಾರ್ದನರೆಡ್ಡಿ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದರು ಎಂದು ನ್ಯಾ. ಸಂತೋಷ ಹೆಗಡೆ ವರದಿ ನೀಡಿದ್ದಾರೆ ಎನ್ನುವ ಬದಲು, ಸಂತೋಷ್ ಲಾಡ್ ವರದಿ ನೀಡಿದರು ಎಂದು ಎರಡು ಬಾರಿ ಉಚ್ಚರಿಸಿದರು. ಆಗ ಸಿಎಂ ಬಳಿ ಹೋದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ 'ಸಂತೋಷ ಲಾಡ್ ಅಲ್ಲ ಸರ್, ಸಂತೋಷ ಹೆಗ್ಡೆ' ಎಂದರು. ಆಗ ತಿದ್ದಿಕೊಂಡ ಸಿಎಂ. ಸಂತೋಷ ಹೆಗ್ಡೆ ಎಂದು ಎರಡು ಬಾರಿ ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಸಂಡೂರು ಕ್ಷೇತ್ರಕ್ಕೆ ಎರಡು ಸಾವಿರ ಮನೆಗಳಿಗೆ ಆದೇಶಿಸಲಾಗಿದೆ. ಸಂಡೂರು ಪಟ್ಟಣಕ್ಕೆ ಒಂದು ಸಾವಿರ ಮನೆ ಕೊಡಲಾಗುವುದು. ಬಡವರ ಬಗ್ಗೆ ಯಡಿಯೂರಪ್ಪ, ಬೊಮ್ಮಾಯಿ, ಎಚ್‌ಡಿಕೆಗೆ ಕಾಳಜಿಯಿಲ್ಲ. ಬಿಜೆಪಿ-ಜೆಡಿಎಸ್ ಬರೀ ಹಿಂದು- ಮುಸ್ಲಿಂ ಎನ್ನುತ್ತ ರಾಜಕೀಯ ಮಾಡುತ್ತಿದೆ. ಎಲ್ಲರೂ ಬೇಕು ಅಂತ ನಾವು ಹೇಳುತ್ತೇವೆ. ನಾನು ಮುಸ್ಲಿಂ ಆಗಿರಬಹುದು. ಆದರೆ, ಮೊದಲು ಭಾರತೀಯ, ಆಮೇಲೆ ಕನ್ನಡಿಗ, ಆನಂತರ ಮುಸ್ಲಿಂ ಎಂದರು.