ಶಿವಮೊಗ್ಗ: ಹಣಗೆರೆ ವನ್ಯಜೀವಿ ವಲಯ ಸಿರಿಗೆರೆ ವ್ಯಾಪ್ತಿಯಲ್ಲಿ ನಡೆದಿದ್ದ ಶ್ರೀಗಂಧ ಮರಗಳ ಕಡಿತಲೆಗೆ ಸಂಬಂಧಿಸಿದಂತೆ ಸಿರಿಗೆರೆ ಅರಣ್ಯಾಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಅರನಲ್ಲಿ ಗ್ರಾಮದ ವಿಜಯಕುಮಾರ್ ಬಂಧಿತ ಆರೋಪಿ. ಕಳೆದ ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ. ಗುರುವಾರ ಬೆಳಗಿನಜಾವ ಹೊಸನಗರ ತಾಲೂಕು ಬಟ್ಟೆಮಲ್ಲಪ್ಪ ಸಮೀಪ ಹೆಬ್ಬಲು ಗ್ರಾಮದಲ್ಲಿ ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದಂತಾಗಿದ್ದು ಪ್ರಕರಣದ ಎರಡನೇ ಆರೋಪಿ ರಾಮಕೃಷ್ಣ ಇನ್ನೂ ತಲೆಮರೆಸಿಕೊಂಡಿದ್ದಾನೆ. ಈ ಹಿಂದೆ ಅರನಲ್ಲಿ ಗ್ರಾಮದ ಮಂಜುನಾಥ ಎಂಬುವರನ್ನು ಬಂಧಿಸಲಾಗಿತ್ತು.
ಕಳೆದ ಸೆ.5ರಂದು ಮಂಜುನಾಥ, ರಾಮಕೃಷ್ಣ ಮತ್ತು ವಿಜಯಕುಮಾರ್ ಸಿರಿಗೆರೆ ವ್ಯಾಪ್ತಿಯಲ್ಲಿ ಶ್ರೀಗಂಧದ ಮರ ಕಡಿತಲೆ ಮಾಡಿದ್ದರು. ಈ ವೇಳೆ ಮೊದಲ ಆರೋಪಿ ಮಂಜುನಾಥನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಇಬ್ಬರ ಬಂಧನಕ್ಕೆ ಅರಣ್ಯಾಧಿಕಾರಿಗಳು ಜಾಲ ಬೀಸಿದ್ದರು.
ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ ಮಾರ್ಗದರ್ಶನದಂತೆ ವಲಯ ಅರಣ್ಯ ಅಧಿಕಾರಿ ಪಿ.ಅರವಿಂದ್ ನೇತೃತ್ವದಲ್ಲಿ ಡಿವೈಆರ್‌ಎಫ್‌ಒ ಶಿವಕುಮಾರ್ ಸುರವನ್ನೆ, ಸಿಬ್ಬಂದಿಗಳಾದ ಕುಮಾರ್ ನಾಯ್ಕ್, ಕೊಟ್ರೇಶ್ ದಾನಮ್ಮನವರ್, ಜೆ.ಬಸವರಾಜ, ಲಕ್ಷ್ಮಣ್ ಇಬ್ರಾಹಿಂಪುರ್, ಡಿ.ಶಿವರಾಜ್ ಮತ್ತು ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಖಚಿತ ಮಾಹಿತಿ ಮೇರೆಗೆ ಹೆಬ್ಬಲು ಗ್ರಾಮದ ಉಮೇಶ್ ಎಂಬುವರ ಮನೆ ಮೇಲೆ ಬೆಳಗಿನ ಜಾವ ದಾಳಿ ಮಾಡಿ ವಿಜಯಕುಮಾರ್‌ನನ್ನು ಬಂಧಿಸಲಾಗಿದೆ.