ಸೋಮವಾರಪೇಟೆ: ಹಾನಗಲ್ಲು ಗ್ರಾಮದ ಕಾಫಿ ತೋಟವೊಂದರಲ್ಲಿನ ಶ್ರೀಗಂಧ ಮರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆ ನಿವಾಸಿ ಕಾಳಪ್ಪ ಅಲಿಯಾಸ್ ಕುಳ್ಳನನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಎಂ.ಕೆ.ಕಾರ್ಯಪ್ಪ ಅವರ ಜಾಗದಲ್ಲಿ 3 ಗಂಧದ ಮರಗಳನ್ನು ಕಡಿದು ಸಾಗಿಸಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಅಧಿಕಾರಿಗಳು ಒಬ್ಬನನ್ನು ಬಂಧಿಸಿ, ಸ್ಥಳದಲ್ಲಿ ಬಿಟ್ಟಿದ್ದ ಮರದ ಬುಡಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಡಿಸಿಎಫ್ ಅಭಿಷೇಕ್, ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಶೈಲೇಂದ್ರಕುಮಾರ್, ಡಿಆರ್‌ಎಫ್‌ಒ ಪ್ರಶಾಂತ್ ದೂಳಕೇಡ್, ಸಿಬ್ಬಂದಿ ಅಯ್ಯಪ್ಪ, ವಿಕಾಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.