ಓವರ್‌ಲೋಡ್ ಮರಳು ಸಾಗಣೆಯಿಂದ ರಸ್ತೆ ಹಾಳಾಗುತ್ತಿದೆ ಎಂದು ಆಕ್ರೋಶಗೊಂಡ ನಗರಗುಂಡ ಗ್ರಾಮಸ್ಥರು ಮರಳು ತುಂಬಿದ ಟಿಪ್ಪರ್‌ಗಳನ್ನು ತಡೆದು ನಿಲ್ಲಿಸಿರುವುದು. 
ಜಿಲ್ಲೆ

ಮರಳು ತುಂಬಿದ ಐದು ಟಿಪ್ಪರ್ ತಡೆದ ಗ್ರಾಮಸ್ಥರು; ರಸ್ತೆ ಹದಗೆಟ್ಟಿದ್ದರಿಂದ ಆಕ್ರೋಶ

Raichur

ದೇವದುರ್ಗ: ತಾಲೂಕಿನ ಜೋಳದಹೆಡಗಿ ಕೃಷ್ಣಾ ನದಿಯಿಂದ ಮರಳು ತುಂಬಿದ ಟಿಪ್ಪರ್‌ಗಳ ಓಡಾಟದಿಂದ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಆಕ್ರೋಶಗೊಂಡ ನಗರಗುಂಡ ಗ್ರಾಮಸ್ಥರು ಭಾನುವಾರ ಐದು ಟಿಪ್ಪರ್ ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪರ್‌ಗಳ ಓಡಾಟದಿಂದ ಹಾಳಾದ ನಗರಗುಂಡ ರಸ್ತೆ.

ಅಧಿಕಾರಿಗಳು ಹಾಗೂ ಮರಳು ಸಾಗಣೆದಾರರೊಂದಿಗೆ ನದಿದಂಡೆ ಗ್ರಾಮಸ್ಥರ ನಡುವೆ ಆಗಾಗ ಮಾತಿನ ಚಕಮಕಿ ನಡೆದು ವಾಹನ ತಡೆದ ಘಟನೆಗಳು ಪದೇಪದೆ ನಡೆಯುತ್ತಿವೆ. ಅಧಿಕಾರಿಗಳು ಮರಳು ಅಕ್ರಮ ಸಾಗಣೆ, ಓವರ್ ಲೋಡ್, ಟಿಪ್ಪರ್‌ಗಳ ಅತಿವೇಗ ನಿಯಂತ್ರಿಸುವ ಬದಲು ಗ್ರಾಮಸ್ಥರಿಗೆ ಬೆದರಿಸಿ ಟಿಪ್ಪರ್‌ಗಳನ್ನು ಬಿಡಿಸಿಕೊಂಡು ಹೋಗುತ್ತಿದ್ದಾರೆ ಎನ್ನುವ ಆರೋಪವಿದೆ.

ಓವರ್‌ಲೋಡ್ ಟಿಪ್ಪರ್‌ಗಳ ಓಡಾಟದಿಂದ ನಗರಗುಂಡದ ರಸ್ತೆ ಸಂಪೂರ್ಣ ಹಾಳಾಗಿವೆ. ಎಲ್ಲೆಂದರಲ್ಲಿ ತೆಗ್ಗು ಬಿದ್ದು, ಮಳೆ ನೀರು ನಿಂತಿವೆ. ಜಿಟಿಜಿಟಿ ಮಳೆ ಸುರಿಯುತ್ತಿರುವ ಕಾರಣ ರಸ್ತೆ ಕೆಸರುಮಯವಾಗಿದೆ. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರೆ, ಪೊಲೀಸರು ಬೆದರಿಸುತ್ತಾರೆ ಎಂದು ನಗರಗುಂಡ ಗ್ರಾಮಸ್ಥರು ಆರೋಪಿಸಿದ್ದಾರೆ.