ಪಾವಗಡ: ಪಟ್ಟಣದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಮೂಲಕ ಪ್ರಭಾವಿಗಳು ಪ್ರಕೃತಿ ಸಂಪತ್ತು ನಾಶಮಾಡುತ್ತಿದ್ದರೂ ತಾಲೂಕು ಕಂದಾಯ ಅಧಿಕಾರಿಗಳು ಕ್ರಮವಹಿಸದೆ ದಿವ್ಯಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದಿಂದ 3 ಕಿ.ಮೀ. ದೂರದ ತುಮಕೂರು ರಸ್ತೆಯ ಕಣಿವೇನಹಳ್ಳಿಗೆ ಹೊಂದಿಕೊಂಡಿರುವ ಬೆಟ್ಟವೊಂದನ್ನು ಅನುಮತಿ ಪಡೆಯದೆ ಅಗೆದು ಕಲ್ಲು-ಮಣ್ಣನ್ನು ಖಾಸಗಿ ಲೇಔಟ್‌ಗಳ ರಸ್ತೆ ನಿರ್ಮಾಣಕ್ಕೆ ಹಾಗೂ ಗುತ್ತಿಗೆದಾರರ ಸರ್ಕಾರಿ ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ತಹಸೀಲ್ದಾರ್ ಗಮನಕ್ಕೆ ತಂದು ದೂರು ನೀಡಿದರೂ ಕ್ರಮ ವಹಿಸಿಲ್ಲ. ನೂತನವಾಗಿ ನಿರ್ಮಾಣವಾಗುತ್ತಿರುವ ಲೇಔಟ್‌ಗಳ ಪಟ್ಟಿ ತೆಗೆದುಕೊಂಡು ತನಿಖೆ ನಡೆಸಿದರೆ ಸಾಕು ಎಲ್ಲಿಂದ ಮಣ್ಣು ತರಲಾಗುತ್ತಿದೆ ಎಂಬ ಸತ್ಯ ಹೊರಬರಲಿದೆ. ಇದಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.
ತುಮಕೂರು ರಸ್ತೆಯ ಕಣ್ಣಿವೇನಹಳ್ಳಿ ಬೆಟ್ಟದ ಪಕ್ಕದಲ್ಲಿರುವ ಅಲ್ಪಸಂಖ್ಯಾತ ಮಹಿಳಾ ವಸತಿ ನಿಲಯದಿಂದ ಶಾಲೆಗೆ ಹೋಗುವ ರಸ್ತೆಯಿಲ್ಲದಂತೆ ಬೆಟ್ಟ ಅಗೆದಿದ್ದು ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡುವಂತಾಗಿದೆ. ಈ ಬಗ್ಗೆ ಅಲ್ಪಸಂಖ್ಯಾತ ಮುಖಂಡರು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಬೆಟ್ಟದ ಸಮೀಪದ ರಸ್ತೆಯಲ್ಲಿಯೇ ಪ್ರತಿ ದಿನ ಕಂದಾಯ ಅಧಿಕಾರಿಗಳು ಓಡಾಡುತ್ತಿದ್ದರೂ ಇದನ್ನು ಕಂಡೂ ಕಾಣದಂತೆ ಕ್ಷಿುಮ್ಮನಾಗಿದ್ದಾರೆ. ಬೆಟ್ಟ-ಗುಡ್ಡಗಳು ಕರಗುತ್ತಿವೆ ಎಂಬ ಭಯ ಒಂದೆಡೆಯಾದರೆ ಪಟ್ಟಣದ ಕೆರೆ ಹಾಗೂ ರಾಜಕಾಲುವೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿ ಅದರ ಮಣ್ಣನ್ನು ಖಾಸಗಿ ಕೆಲಸಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂಬ ಇನ್ನೊಂದು ಆತಂಕ ಆವರಿಸಿದೆ.
ಕಣಿವೇನಹಳ್ಳಿ ಸರ್ವೇ ನಂಬರ್ 37ರ ಬೆಟ್ಟವು ಸರ್ಕಾರದ ವಶದಲ್ಲಿದ್ದು ಮಣ್ಣು ತೆರವುಗೊಳಿಸಿದರೆ ಅನುಕೂಲ ವಾಗುತ್ತದೆ. ಆದರೆ ಇಲ್ಲಿ ಅಕ್ರಮವಾಗಿ ಬೆಟ್ಟ-ಗುಡ್ಡಗಳ ಅಗೆಯುತ್ತಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು.
ವರದರಾಜು, ತಹಸೀಲ್ದಾರ್ ಪಾವಗಡ
ಈ ಜಾಗವನ್ನು ಇಲಾಖೆಗಳಿಗೆ ನೀಡಿದ್ದು ಅಲ್ಲಿರುವ ಮಣ್ಣು ಖಾಲಿಯಾದ ಕೂಡಲೇ ನಿಮಗೆ ಓಡಾಡಲು ರಸ್ತೆಗೆ ಅನುಕೂಲ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದರಲ್ಲಿ ಖಾಸಗಿಯವರು ಬಂದು ಅಕ್ರಮವಾಗಿ ಈ ರಸ್ತೆ ಒತ್ತುವರಿ ಮಾಡಿಕೊಂಡಿರುವುದರಿಂದ ಈಗ ಅತಂಕ ಎದುರಾಗಿದೆ.
ಸುಬ್ಬನಾಯ್ಕ, ಕಣಿವೇನಹಳ್ಳಿ ಗ್ರಾಮಸ್ಥ
ಕಣಿವೇನಹಳ್ಳಿ ಸರ್ವೇ ನಂ.114ರಲ್ಲಿ ಸರ್ಕಾರ ಗೋಮಾಳದ ಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ.
ಶಂಕರನಾಯ್ಕ, ಗ್ರಾಮಸ್ಥ