ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸರು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಯಿಂದ ದ್ವೀಪ ಕಿರಿದಾಗುತ್ತಿದೆ. ಅಲ್ಲಿ ನೆಲೆಸಿರುವ ಜನರು ಸಂಕಷ್ಟದಲ್ಲಿದ್ದಾರೆ. ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದ್ದರೂ ಗಣಿ ಮತ್ತು ಪೊಲೀಸ್ ಇಲಾಖೆ ಗಮನ ಹರಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸಭೆಯ ಗಮನ ಸೆಳೆದರು.
ಸ್ಥಳೀಯರು ನನಗೂ ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದರು. ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಅನುಪಮ್ ಅಗರವಾಲ್ ಉತ್ತರಿಸಿದಾಗ ಇಡೀ ಊರಿಗೆ ತಿಳಿದಿದೆ. ನಿಮ್ಮ ಗಮನಕ್ಕೆ ಮಾತ್ರ ಬಂದಿಲ್ಲವೇ ಎಂದು ಸಚಿವರು ಪ್ರಶ್ನಿಸಿದರು.
ಪಾವೂರು ಉಳಿಯ ಮಾತ್ರ ಅಲ್ಲ ಎಲ್ಲ ಕಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಎಲ್ಲ ರೀತಿಯ ಅಕ್ರಮ ಮರಳುಗಾರಿಕೆ ನಿಲ್ಲಿಸಲು ಕ್ರಮ ವಹಿಸಿ ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.
ಅಕ್ರಮ ಮರಳುಗಾರಿಕೆಯ ಗಂಭೀರವಾಗಿ ಪರಿಗಣಿಸಿ, ತಕ್ಷಣ ನಿಲ್ಲಿಸಲು ಕ್ರಮ ವಹಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
....................................