ಜಿಲ್ಲೆ

ಫೆ.12 ರಿಂದ 16 ರವರೆಗೆ ಸಂಚಲನ ಮಕ್ಕಳ ನಾಟಕೋತ್ಸವ

ಮೈಸೂರು: ಸಂಚಲನ ಮೈಸೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ.12 ರಿಂದ 16 ರವರೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಚಲನ ಮಕ್ಕಳ ನಾಟಕೋತ್ಸವ ಹಾಗೂ ಜಾನಪದ ಉತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ದೀಪಕ್ ಮೈಸೂರು ತಿಳಿಸಿದರು.

12ರಂದು ಸಂಜೆ 6.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಶಾಸಕ ಕೆ. ಹರೀಶ್‌ಗೌಡ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷೆ ಪ್ರೊ.ಎಂ.ಎಸ್.ಸಪ್ನ್ನಾ, ನಟ ಮಂಡ್ಯ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಭಾಗವಹಿಸಲಿದ್ದಾರೆ. ಬಳಿಕ ಮಕ್ಕಳಿಂದ ಜಾನಪದ ಸಿರಿ ವೈಭವ, ನಂತರ ನಟನ ರಂಗ ಶಾಲೆಯ ಮಕ್ಕಳಿಂದ ಜಯತೀರ್ಥ ರಚನೆಯ, ಮಂಡ್ಯ ರಮೇಶ್ ನಿರ್ದೇಶನದ ಹೆಬ್ಬಾಲ ನಾಟಕ ಪ್ರದರ್ಶನವಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

13ರಂದು ಸಂಜೆ 6.30ಕ್ಕೆ ಸಂಚಲನ ಮಕ್ಕಳ ರಂಗ ತಂಡದಿದ ಲೀಲಾ ಗರಡಿ ರಚನೆಯ ಹಾಗೂ ಅಶೋಕ್ ನೀನಾಸಂ ನಿರ್ದೇಶನದ ‘ಲಂಬ ಕರ್ಣನ ಉಷ್ಣೀಷ’, 14 ರಂದು ಸಂಜೆ 6.30ಕ್ಕೆ ಸ್ಯಾಂಡಲ್ ರೋಸ್ ಶಾಲೆಯ ಮಕ್ಕಳಿಂದ ತ್ಯಾಗರಾಜು ದೇವರಹಳ್ಳಿ ನಿರ್ದೇಶನದ ‘ಪುಣ್ಯಕೋಟಿ’, 15ರಂದು ಸಂಜೆ 6.30ಕ್ಕೆ ನಟರಾಜ್ ಹೊನ್ನವಳ್ಳಿ ಅವರು ಕನ್ನಡಕ್ಕೆ ರೂಪಾಂತರಿಸಿರುವ ಸಫ್ದರ್ ಹಶ್ಮಿ ರಚನೆಯ ಎಂ.ಎಚ್.ಭಾವನ ನಿರ್ದೇಶನದ ‘ಕೆಂಪು ಹೂ’ ನಾಟಕವನ್ನು ಸಂಚಲನ ಮಕ್ಕಳ ರಂಗ ತಂಡ ಪ್ರಸ್ತುತ ಡಿಸಲಿದೆ. ಬಳಿಕ ಹುಣಸೂರಿನ ರಂಗ ಗರಡಿ ತಂಡದಿಂದ ಬೊಳುವಾರ ಮಹಮ್ಮದ್ ಕುಂಞ ರಚನೆಯ ಡಾ.ಶ್ರೀಪಾದ ಭಟ್ ನಿರ್ದೇಶನ ‘ಪಾಪು ಬಾಪು’ ನಾಟಕವಿದೆ ಎಂದು ಮಾಹಿತಿ ನೀಡಿದರು.

16ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಂಗಕರ್ಮಿ ರಾಜಶೇಖರ ಕದಂಬ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕಿ ಮಂಜುಳಾ, ಡಿಡಿಪಿಐ ಎಚ್.ಕೆ.ಪಾಂಡು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಎಂ.ಪಿ.ಸುರೇಶ್ ಭಾಗವಹಿಸಲಿದ್ದಾರೆ ಎಂದರು.

ಸಂಚಲನ ಮೈಸೂರು ಸಂಸ್ಥೆ ಪದಾಧಿಕಾರಿಗಳಾದ ಶೋಭಾ ಶಿವರಾಜ್, ಪೂಜಾ, ಡಾ.ನವೀನ್‌ಕುಮಾರ್, ತ್ಯಾಗರಾಜ್, ಕಾರ್ತಿಕ್, ರಶ್ಮಿ ಹಾಜರಿದ್ದರು.