ಹೋಬಳಿಯ ಚಗಚಗೆರೆ ಗ್ರಾಮದ ಶ್ರೀ ಕ್ಷೇತ್ರ ಧರ್ಮಧ್ವಜ ಉದ್ಭವ ಶನೈಶ್ಚರಸ್ವಾಮಿ ಅವರ ನೂತನ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಸಿ.ಎನ್.ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಸುರೇಶ್ ಬಾಬು ಇತರರು ಇದ್ದರು.  
ಜಿಲ್ಲೆ

ಸನಾತನ ಧರ್ಮ ಹಿಂದುಗಳ ಅವಿಭಾಜ್ಯ ಅಂಗ

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಮತ

ಗಂಡಸಿ : ಭರತ ಖಂಡದಲ್ಲಿ ಸನಾತನ ಧರ್ಮ ಹಿಂದುಗಳ ಅವಿಭಾಜ್ಯ ಅಂಗವಾಗಿದೆ. ನಮ್ಮ ದೇಶದ ಮಾಹಿತಿ ತಂತ್ರಜ್ಞಾನ ನೆರೆಯ ದೇಶಗಳಿಗೆ ಸವಾಲೊಡ್ಡುವ ಎತ್ತರಕ್ಕೆ ಬೆಳೆದಿದೆ ಎಂದು ಜಾತ್ಯಾತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಹೋಬಳಿಯ ಚಗಚಗೆರೆ ಗ್ರಾಮದ ಶ್ರೀ ಕ್ಷೇತ್ರ ಧರ್ಮಧ್ವಜ ಉದ್ಭವ ಶನೈಶ್ಚರಸ್ವಾಮಿಯ ನೂತನ ದೇವಾಲಯದ ಉದ್ಘಾಟನೆ ಹಾಗೂ ವಿಮಾನ ಗೋಪುರದ ಕಲಶಾರೋಹಣ ಮಹೋತ್ಸವದಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಂಬಿಕೆಯೊಂದಿಗೆ ಭಗವಂತನನ್ನು ಪೂಜಿಸಿದರೆ ಎಂದಿಗೂ ಕೈ ಬಿಡುವುದಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ದೇವಾಲಯಗಳನ್ನು ನಿರ್ಮಿಸುವುದು ಎಷ್ಟು ಮುಖ್ಯವೋ ಅವುಗಳ ನಿರ್ವಹಣೆಯೂ ಅಷ್ಟೇ ಮುಖ್ಯ. ಸರ್ಕಾರದ ಅನುದಾನದಲ್ಲಿ ದೇವಾಲಯಗಳ ನಿರ್ಮಾಣ ವಿರಳವಾಗುತ್ತಿದ್ದು, ಭಕ್ತರ ಸಹಾಯದಿಂದ ಸಾವಿರಾರು ದೇವಾಲಯಗಳು ನಿರ್ಮಾಣವಾಗುತ್ತಿರುವುದು ಶ್ಲಾಘನೀಯ. ನಮ್ಮ ಸನಾತನ ಧರ್ಮದ ಸಂಸ್ಕೃತಿಯನ್ನು ವಿದೇಶಿ ಭಕ್ತರು ಅಳವಡಿಸಿಕೊಳ್ಳುತ್ತಿದ್ದು, ಇಂತಹ ಸಂದರ್ಭದಲ್ಲಿ ನಮ್ಮ ಪರಂಪರೆಯನ್ನು ಎತ್ತರಕ್ಕೆ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಶಾಸಕರಾದ ಸಿ.ಎನ್.ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಜಿ.ಪಂ.ಮಾಜಿ ಸದಸ್ಯ ಅಶೋಕ್, ತಾ.ಪಂ. ಮಾಜಿ ಸದಸ್ಯ ಗಂಗಾಧರ್, ಮುಖಂಡರಾದ ಚನ್ನರಾಯಪಟ್ಟಣ ಹುಲ್ಲೇಕೆರೆ ಕುಮಾರ್, ಗಂಡಸಿ ಮಂಜಣ್ಣ, ಲಾಳನಕೆರೆ ಯೋಗೇಶ್, ವಿನಯ್ ಮತ್ತು ಚಗಚಗೆರೆ- ಶೆಟ್ಟಿ ಕೊಪ್ಪಲು ಗ್ರಾಮಸ್ಥರು, ಭಕ್ತ ಸಮೂಹ ಹಾಜರಿದ್ದರು.