ಹುಬ್ಬಳ್ಳಿ : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಅಠವಲೆ ಅವರ 83ನೇ ಜನ್ಮೋತ್ಸವ ಮತ್ತು ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ ಮೇ 17 ರಿಂದ 19ರವರೆಗೆ ಗೋವಾದ ಪೋಂಡಾದಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಆಯೋಜಿಸಲಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸನಾತನ ಸಂಸ್ಥೆಯ ವಿದುಲಾ ಹಳದೀಪುರ, ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ಸಮರ್ಪಿಸಿಕೊಂಡಿರುವ ಸಂತರು, ಮಹಂತರು, ಹಿಂದುತ್ವ ರಕ್ಷಕರು, ವಿಚಾರವಂತರು, ಕೇಂದ್ರ ಸಚಿವರು, ಕೆಲ ರಾಜ್ಯಗಳ ಮುಖ್ಯಮಂತ್ರಿಗಳು, 25 ಸಾವಿರಕ್ಕೂ ಹೆಚ್ಚಿನ ಸಾಧಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ ಗುರೂಜಿ, ಪತಂಜಲಿ ಯೋಗ ಪೀಠದ ಸ್ವಾಮಿ ಬಾಬಾ ರಾಮದೇವ, ಕೇಂದ್ರ ಸಚಿವ ಶ್ರೀಪಾದ ನಾಯಿಕ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ ಶಿಂಧೆ, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಛತ್ತಿಸಗಢ ಮುಖ್ಯಮಂತ್ರಿ ವಿಷ್ಣುದೇವ ಸಾಯ, ಇತರರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ ಸೇರಿ ಇನ್ನಿತರರಿಗೆ ಸನಾತನ ಧರ್ಮಶ್ರೀ ಹಾಗೂ ಹಿಂದು ರಾಷ್ಟ್ರ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪಾರಂಪರಿಕ ಕಲೆ ಮತ್ತು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು.
ಮೇ 19ರಂದು ವಿಶ್ವ ಕಲ್ಯಾಣಕ್ಕಾಗಿ ಮಹಾಧನ್ವಂತರಿ ಯಜ್ಞ ನಡೆಯಲಿದೆ. ಒಂದು ಸಾವಿರ ವರ್ಷಗಳ ಹಿಂದಿನ ಪವಿತ್ರ ಸೋಮನಾಥ ಜ್ಯೋತಿರ್ಲಿಂಗವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು. ಈ ಜ್ಯೋತಿರ್ಲಿಂಗವನ್ನು ಆಕ್ರಮಣಕಾರ ಮಹ್ಮದ್ ಘಜ್ನಿ ದ್ವಂಸಗೊಳಿಸಿದ್ದ. ನಂತರ ಅದನ್ನು ಅಗ್ನಿಹೋತ್ರ ಪರಂಪರೆಯ ಆಧ್ಯಾತ್ಮಿಕ ಸಾಧಕರು ಸಂರಕ್ಷಿಸಿದ್ದರು ಎಂದು ತಿಳಿಸಿದರು.
ಶಾಂತಣ್ಣ ಕಡಿವಾಳ, ರಾಜಣ್ಣ ಕೊರವಿ, ದಯಾನಂದ ರಾವ್, ಮಹಾದೇವ ಸಾಗರರೇಕರ ಸುದ್ದಿಗೋಷ್ಠಿಯಲ್ಲಿ ಇದ್ದರು.