ಪಣಜಿ: ಸ್ಥಳೀಯ ಫರ್ವಗುಡಿ, ಪೊಂಡಾದಲ್ಲಿನ ಗೋವಾ ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಮೇ 17ರಿಂದ 19ರವರೆಗೆ ನಡೆಯುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಕೇವಲ ಧಾರ್ವಿುಕ ಕಾರ್ಯಕ್ರಮವಾಗಿರದೇ, ಅಂತಾರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ ಜಾಗೃತಿಯ ಮಹೋತ್ಸವವಾಗಲಿದೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹಂಸ ತಿಳಿಸಿದರು.
ಪಣಜಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮಹೋತ್ಸವದಲ್ಲಿ 23 ದೇಶಗಳ ಗಣ್ಯರು, ವಿವಿಧ ಪಂಥಗಳ ಸಂತರು, ದೇವಸ್ಥಾನಗಳ ಧರ್ವಧಿಕಾರಿಗಳು ಮತ್ತು 25000ಕ್ಕಿಂತಲೂ ಹೆಚ್ಚು ಸಾಧಕರು, ಭಕ್ತರು ಭಾಗವಹಿಸಲಿದ್ದಾರೆ. ಯಜ್ಞಯಾಗಾದಿಗಳಿಂದಾಗಿ ಈ ಕಾರ್ಯಕ್ರಮವು ಕಾಶಿ, ಉಜ್ಜಯಿನಿ ಮತ್ತು ಅಯೋಧ್ಯೆಯಂತೆ ಆಧ್ಯಾತ್ಮಿಕ ಪ್ರವಾಸೋದ್ಯಮದ ಹೊಸ ಅಧ್ಯಾಯವಾಗಿ ಪರಿಗಣಿಸಲಾಗುತ್ತದೆ. ಇದರಿಂದ ಅಭಿವೃದ್ಧಿಗೂ ಉತ್ತೇಜನ ದೊರೆಯಲಿದೆ ಎಂದು ಅವರು ತಿಳಿಸಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಗುರುದೇವ ಶ್ರೀ ರವಿಶಂಕರ ಗುರೂಜಿಯವರ ಆಶೀರ್ವಾದದಿಂದ ಮೇ 17ರಿಂದ 19ರವರೆಗೆ ಸೋರಟಿ ಸೋಮನಾಥ ಜ್ಯೋರ್ತಿಲಿಂಗವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು. ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಆಯುಧಗಳ ಪ್ರದರ್ಶನವೂ ನಡೆಯಲಿದೆ ಎಂದು ತಿಳಿಸಿದರು.
ಆಧ್ಯಾತ್ಮಿಕತೆಯ ಶಂಖನಾದ: ಇತರ ಉದ್ಯಮಗಳ ಹೋಲಿಕೆಯಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವು ಸುರಕ್ಷಿತ ಮತ್ತು ಶಾಶ್ವತ ಅಭಿವೃದ್ಧಿಗೆ ಪ್ರೇರಕವಾಗಿರುವುದರ ಜೊತೆಗೆ ಸಮಾಜದ ನೈತಿಕ ಮೌಲ್ಯಗಳ ಪುನರ್ಸ್ಥಾಪನೆಗೂ ಸಹಾಯ ಮಾಡುತ್ತದೆ. ಈ ಮಹೋತ್ಸವದ ಮೂಲಕ ದೇವಸ್ಥಾನ ಪರಂಪರೆ, ಜನಪದಕಲೆ, ಸಾಂಸ್ಕೃತಿಕ ಪರಿಚಯದೊಂದಿಗೆ ಸಾಧನೆ, ಆಧ್ಯಾತ್ಮಿಕ ಚಿಂತನೆ ಹಾಗೂ ರಾಷ್ಟ್ರ›ಭಕ್ತಿಮಯ ಮೌಲ್ಯಗಳ ಜಾಗೃತಿ ಮೂಡಿಸಲಾಗುತ್ತದೆ. ಒಟ್ಟಾರೆ ಈ ಶಂಖನಾದ ಮಹೋತ್ಸವ ಭವಿಷ್ಯದ ಉಜ್ವಲ ಆಧ್ಯಾತ್ಮಿಕತೆಯ ಶಂಖನಾದವಾಗಿದೆ ಎಂದು ಅವರು ವಿಶ್ಲೇಷಿಸಿದರು.
ಆರ್ಟ್ ಆಫ್ ಲಿವಿಂಗ್ನ ಸಂತೋಷ ಘೊಡಗೆ, ಸಾಂಸ್ಕೃತಿಕ ನ್ಯಾಸದ ಜಯಂತ ಮಿರಿಂಗ್ಕರ್, ಅಂತಾರಾಷ್ಟ್ರೀಯ ಬಜರಂಗ ದಳದ ನಿತಿನ್ ಫಳದೇಶಾಯಿ, ಕುಂಡೈ ತಪೋಭೂಮಿಯ ಪದ್ಮನಾಭ ಪಂಥದ ಸುಜನ್ ನಾಯಕ್, ಬ್ರಾಹ್ಮಣ ಮಹಾಸಂಘದ ರಾಜ್ ಶರ್ವ, ಜಗದ್ಗುರು ಸ್ವಾಮಿ ನರೇಂದ್ರಾಚಾರ್ಯ ಮಹಾರಾಜರ ಶಿಷ್ಯರಾದ ಅನಿಲ ನಾಯಕ್, ಗೋಮಂತಕ ಮಂದಿರ ಮಹಾಸಂಘದ ಜಯೇಶ್ ತಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಯುವರಾಜ್ ಗಾವ್ಕರ್ ಸುದ್ದಿಗೋಷ್ಠಿಯಲ್ಲಿದ್ದರು.