ಜಿಲ್ಲೆ

ಸನಾತನ ಹಿಂದು ಧರ್ಮ ಜಗತ್ತನ್ನು ಪ್ರೀತಿಸುವ ಧರ್ಮ

ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿಕೆ

ಮಾಗಡಿ : ಭಾರತೀಯ ಸನಾತನ ಹಿಂದು ಧರ್ಮ ಜಗತ್ತನ್ನು ಪ್ರೀತಿಸುವ, ಪೋಷಿಸುವ, ಮಾನವ ಧರ್ಮ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ತಿರುಮಲೆ ಗೇಟ್ ಬಳಿಯ ಶ್ರೀ ಶಿರಡಿ ಸಾಯಿ ಗಣೇಶ ಮಂದಿರ ದೇವಾಲಯವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದು ಸಂಸ್ಕೃತಿ ಜಗತ್ತಿನ ಸಂಸ್ಕೃತಿ ಯಾಗಬೇಕು. ಭಾರತೀಯ ಸನಾತನ ಸಂಸ್ಕೃತಿಯನ್ನು ರಕ್ಷಣೆ ಮಾಡಲು ಸಾಕಷ್ಟು ಒತ್ತಡವಿದೆ. ಮಾನವ ಸಂಕುಲ ನೆಮ್ಮದಿಯಿಂದ ಪ್ರೀತಿಯಿಂದ ಇರಲು ಭಕ್ತಿಯೂ ಪ್ರಧಾನವಾಗಬೇಕು. ಸನಾತನ ಸಂಸ್ಕೃತಿಯಲ್ಲಿ ಆಚರಣೆಯ ಕೇಂದ್ರಗಳು ದೇವಾಲಯಗಳು. ನಮ್ಮ ಆಚಾರ ವಿಚಾರಗಳನ್ನು ಮರೆಯಬಾರದು ಎಂದರು.

ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಜ್ಞಾನದ ಅರಿವು ಕಡಿಮೆಯಾಗುತ್ತಿದೆ. ಇದರಿಂದ ತಂದೆ-ತಾಯಿಯ ಬಗ್ಗೆ ಮಕ್ಕಳಲ್ಲಿ ಗೌರವ ಕಡಿಮೆಯಾಗುತ್ತಿದೆ ಎಂದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಮನುಷ್ಯನಿಗೆ ಗುರು ಬಲ ಕಡಿಮೆಯಾದರೆ ಸಾಯಿ ಬಾಬಾ, ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದರೆ ಗುರುಗಳ ಬಲ ಬಂದು ಜೀವನ ಉತ್ತಮವಾಗುತ್ತದೆ ಇದು ಸನಾತನ ಹಿಂದು ಧರ್ಮದ ಪ್ರತೀತಿಯಾಗಿದೆ ಎಂದರು.

ನಿವೃತ್ತ ಕೆಎಎಸ್ ಅಧಿಕಾರಿ ಕೋಡಿಪಾಳ್ಯ ಡಾ.ಎನ್.ಕೃಷ್ಣಪ್ಪ ಬರೆದ ಸಾಯಿರಾಮ್ ಕಲಿಯುಗದ ಆರಾಧ್ಯ ದೈವ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.

ಮಾಜಿ ಸಚಿವ ಎಚ್.ಎಂ.ರೇವಣ್ಣ, ಪುರಸಭಾ ಸದಸ್ಯೆ ಭಾಗ್ಯಮ್ಮ, ಮಾಜಿ ಅಧ್ಯಕ್ಷ ಮಂಜುನಾಥ್, ಮಾಜಿ ಸದಸ್ಯ ರಘು, ನ್ಯಾಯಾಧೀಶರಾದ ನಾಗರಾಜು, ಕೃಷ್ಣ ನಾಯ್ಕ, ಪ್ರಾಂಶುಪಾಲ ಎಂ.ಸಿ.ಗೋವಿಂದರಾಜು, ಡಾಬಾ ರಮೇಶ್, ಡೋಲಾ ರಂಗನಾಥ್, ನಾರಾಯಣ್, ನಂಜುಂಡಯ್ಯ, ಕೆಂಪೇಗೌಡ, ಹಲಸಬೆಲೆ ಶಿವಕುಮಾರ್, ಎಪಿಎಂಸಿ ನಾರಾಯಣಪ್ಪ, ಗುತ್ತಿಗೆದಾರ ಕೆಂಪರಾಜು, ಮೂರ್ತಿ ಇದ್ದರು.