ಹುಬ್ಬಳ್ಳಿ: ಸಮುತ್ಕರ್ಷ ಟ್ರಸ್ಟ್ ಐಎಎಸ್ ಅಕಾಡೆಮಿಯು ಸಮಾಜಸೇವಾ ಭಾವನೆಯಿಂದ ಜನ್ಮತಳೆದಿದ್ದು, ಇದರಿಂದ ನಾಗರಿಕ ಸೇವಾ ಕ್ಷೇತ್ರಕ್ಕೆ ಕಾಲಿಡುವ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶ ಹೊಂದಲಾಗಿದೆ. ಈ ಕಾರ್ಯದಲ್ಲಿ ಪಾಲಕರೂ ಕೈಜೋಡಿಸಬಹುದಾಗಿದೆ ಎಂದು ಸಂಸ್ಥಾಪಕ ಟ್ರಸ್ಟಿ ಜಿತೇಂದ್ರ ನಾಯಕ ಹೇಳಿದರು.
ಇಲ್ಲಿಯ ಬಿ.ವಿ.ಬಿ. ಆವರಣದ ಸಮುತ್ಕರ್ಷ ಅಕಾಡೆಮಿಯಲ್ಲಿ ಭಾನುವಾರ ಏರ್ಪಡಿಸಿದ್ದ ಹಳೇ ವಿದ್ಯಾರ್ಥಿಗಳ ಪಾಲಕರ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮುತ್ಕರ್ಷ ಈಗ ರಾಜ್ಯದ ವಿವಿಧೆಡೆ ವಿಸ್ತರಣೆಯಾಗಿದೆ. ಇಲ್ಲಿಗೆ ಬರುವ ಮಕ್ಕಳ ಪಾಲಕರು ಅನೇಕರು ವಿವಿಧ ಕ್ಷೇತ್ರಗಳಲ್ಲಿ ಜ್ಞಾನ ಇರುವವರಾಗಿದ್ದಾರೆ. ಅವರ ಅನುಭವ ವಿದ್ಯಾರ್ಥಿಗಳಿಗೆ ಧಾರೆ ಎರೆದರೆ ಸಮಾಜಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಸಮುತ್ಕರ್ಷ ಅಕಾಡೆಮಿಯು ಮಕ್ಕಳಲ್ಲಿ ಎಲ್ಲಕ್ಕಿಂತ ಮೊದಲು ನಾಯಕತ್ವದ ಗುಣ ಬೆಳೆಸುತ್ತದೆ. ನಂತರದಲ್ಲಿ ನಾಗರಿಕ ಸೇವಾ ಕ್ಷೇತ್ರದಲ್ಲಿನ ಅವಕಾಶಗಳು, ಅದನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ತಿಳಿಸಿಕೊಡುತ್ತದೆ. ಈಗಾಗಲೇ ಸಿವಿಲ್ ಸರ್ವಿಸ್ ನಲ್ಲಿ ಇದ್ದು ಅಥವಾ ನಿವೃತ್ತರಾದ ಮಹನೀಯರಿಂದ ತರಬೇತಿ ನೀಡುವುದು, ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಏಪ್ರಿಲ್ 2ರಿಂದ ಮೂರು ದಿನಗಳವರೆಗೆ ಆಯೋಜಿಸಿರುವ ವಿಶೇಷ ಶಿಬಿರದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಸಮುತ್ಕರ್ಷದ ವಿಶಾಲ ಸಂಗಣ್ಣವರ, ಕಿರಣಕುಮಾರ, ಪ್ರಭು ಪಾಟೀಲ, ಇತರರು ಇದ್ದರು.