ಜಿಲ್ಲೆ

ರಂಗಭೂಮಿಯ ಮೌನ ಆತಂಕಕಾರಿ: ನಾಗರಾಜಮೂರ್ತಿ:  ಸಮುದಾಯ 50 ನಾಟಕೋತ್ಸವ ಉದ್ಘಾಟನೆ

ಪಂಕಜ ಕೆ.ಎಂ.

ಬೆಂಗಳೂರು: ಸಮಾಜ ಎದುರಿಸುತ್ತಿರುವ ಆತಂಕಗಳ ಬಗ್ಗೆ ಕನ್ನಡ ರಂಗಭೂಮಿ ಮೌನವಾಗಿರುವುದು ವಿಷಾದಕರ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ. ವಿ. ನಾಗರಾಜ ಮೂರ್ತಿ ಆತಂಕ ವ್ಯಕ್ತಪಡಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಮುದಾಯ- 50 ರ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿರುವ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿ ಈ ಹಿಂದೆ ಒಂದು ಚಳವಳಿಯಾಗಿತ್ತು. ಸಮಾಜದ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುತ್ತಿತ್ತು. ಅಸಮಾನತೆ ವಿರೋಧಿಸಲು, ಕೋಮು ಆತಂಕ ಎದುರಿಸಲು ಕಾರಣವಾಗಿತ್ತು. ಆದರೆ ಇತ್ತೀಚೆಗೆ ರಂಗಭೂಮಿ ಈ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾಲ್ಕು ಗೋಡೆಗಳ ನಡುವೆ ಇದ್ದ ನಾಟಕವನ್ನು ಜನಸಾಮಾನ್ಯರ ಬಳಿಗೆ ಕರೆದುಕೊಂಡು ಹೋದ ಸಮುದಾಯ ಸುವರ್ಣ ಸಂಭ್ರಮದಲ್ಲಿರುವಾಗ ರಂಗಭೂಮಿ ಮತ್ತೆ ತನ್ನನ್ನು ವಿಮರ್ಶಿಸಿಕೊಂಡು ಜನಪರವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಲೋಕದ ಬೊಳುವಾರು ಮಹಮದ್ ಕುಂಞಿ, ಸಿ ಬಸವಲಿಂಗಯ್ಯ, ಲಕ್ಷ್ಮಿ ಚಂದ್ರಶೇಖರ್, ರಘುನಂದನ್, ಶ್ರೀನಿವಾಸ ಜಿ. ಕಪ್ಪಣ್ಣ, ಜಿ ಲೋಕೇಶ್, ಎಲ್. ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಸಮುದಾಯದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಇತರರು ಇದ್ದರು.