ಉಡುಪಿ: ಮೊಬೈಲ್ ಗೀಳಿನಿಂದ ಮನುಷ್ಯತ್ವ ನಾಶವಾಗುತ್ತಿದೆ. ಮಕ್ಕಳಿಗೆ ನಾಟಕ, ಯಕ್ಷಗಾನ, ಸಂಗೀತದ ಆಸಕ್ತಿ ಬೆಳೆಸಬೇಕು. ನೈಜ ಸಂಸತಿ ಕಲಿಸುವ ಕೆಲಸವಾಗಬೇಕು. ಮೊಬೈಲ್ ಶಿಕ್ಷಣಕ್ಕಾಗಿ ಮಾತ್ರ ಉಪಯೋಗಿಸಿ, ಉಳಿದಂತೆ ಮಕ್ಕಳಿಗೆ ಲಲಿತ ಕಲೆಗಳನ್ನು ಪರಿಚಯಿಸಬೇಕು ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ. ವಿ. ನಾಗರಾಜಮೂರ್ತಿ ಹೇಳಿದರು.
ಕನ್ನಡ ಮತ್ತು ಸಂಸತಿ ಇಲಾಖೆ, ಯಕ್ಷಗಾನ ಅಕಾಡೆಮಿ, ಜಾನಪದ ಅಕಾಡೆಮಿ ಮತ್ತು ನಾಟಕ ಅಕಾಡೆಮಿ ಸಹಯೋಗದಲ್ಲಿ ರಂಗಭೂಮಿ ಉಡುಪಿ ವತಿಯಿಂದ ನಡೆದ ಸಂಸತಿ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದೇಶದಲ್ಲಿ ಏಕಮುಖಿ ಸಂಸತಿ ಆರ್ಭಟ ಹೆಚ್ಚಾಗುತ್ತಿದೆ. ಭಾರತೀಯ ಸಂಸತಿ ಹೆಸರಿನಲ್ಲಿ ವೈದಿಕ ಸಂಸತಿ ಹಬ್ಬಿಸುವ ಹುನ್ನಾರ ನಡೆಯುತ್ತಿದೆ. ಯಕ್ಷಗಾನ, ಜಾನಪದ ಕಲೆಗಳು ವೈವಿಧ್ಯಮಯ ಸಂಸತಿ ಬೆಳೆಸುತ್ತಿದೆ. ಕರ್ನಾಟಕ ಶ್ರೀಮಂತ ಪರಂಪರೆ ಹೊಂದಿದೆ ಎಂದರು.
ಸಮಾರಂಭವನ್ನು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಉದ್ಘಾಟಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಶಾರದಾ ರೆಸಿಡೆನ್ಸಿ ಶಾಲೆಯ ಸಂಚಾಲಕ ವಿದ್ಯಾವಂತ ಆಚಾರ್ಯ, ರಂಗಭೂಮಿ ಉಪಾಧ್ಯಕ್ಷ ಎನ್. ಆರ್. ಬಲ್ಲಾಳ್, ಆರ್ ಆರ್ ಸಿ ನಿರ್ದೇಶಕ ಡಾ. ಜಗದೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಸಂಸತಿ ಇಲಾಖೆ ರಿಜಿಸ್ಟ್ರಾರ್ ನಮ್ರತಾ ಸ್ವಾಗತಿಸಿ, ಕರ್ನಾಟಕ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ರವಿರಾಜ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಭಾರತ ದೇಶಕ್ಕೆ ವಿಶ್ವದಲ್ಲಿ ಬೇರೆಲ್ಲೂ ಕಾಣದ ಬೃಹತ್ ಕಥನ ಪರಂಪರೆ ಇದೆ. ರಾಮಾಯಣ ಮತ್ತು ಮಹಾಭಾರತಗಳಲ್ಲದೆ ಕಥಾ ಸರಿತ್ಸಾಗರ, ಜೈನ ಮತ್ತು ಬೌದ್ಧ ದರ್ಶನಗಳಲ್ಲಿಯೂ ಕಥೆಗಳಿವೆ. ಪ್ರಾಚಿನ ದೇವಸ್ಥಾನಗಳಲ್ಲಿ ಕಥೆ ಹೇಳುವ ಶಿಲ್ಪಗಳಿವೆ. ಪ್ರಾದೇಶಿಕ ಭಾಷೆಗಳಲ್ಲೂ ಈ ಪರಂಪರೆ ಬೆಳೆದಿದ್ದು, ಕವಿಗಳು ತಮಗೆ ಬೇಕಾದ ಹಾಗೆ ಸ್ಥಳಿಯಮಟ್ಟಕ್ಕೆ ಪರಿವರ್ತಿಸಿ ವಿಸ್ತರಿಸಿದ್ದಾರೆ. ರಂಗಭೂಮಿ ಚಟುವಟಿಕೆಗಳು ಇದರ ಮುಂದುವರಿದ ಭಾಗವಾಗಿದೆ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ