ಜಿಲ್ಲೆ

ಪ್ರತಿಭಾ ಕಲೋತ್ಸವದಿಂದ ಸಂಸ್ಕಾರ: ಡಾ ಎಂ.ಮೋಹನ ಆಳ್ವ ಅನಿಸಿಕೆ

ಮೂಡುಬಿದಿರೆ: ಕಾಲ ಕಾಲಕ್ಕೆ ಸರಿಯಾದ ವಿದ್ಯೆ ಬುದ್ಧಿಯ ಜತೆಗೆ ಹೃದಯಕ್ಕೆ ಸಂಸ್ಕಾರ ಒದಗಿಸುವ ಕೆಲಸ ಈ ಪ್ರತಿಭಾ ಕಲೋತ್ಸವದ ಮೂಲಕ ಸಹಕಾರಗೊಳ್ಳಲಿದೆ. ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಭಾರತ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಪ್ರತಿಭಾ ಕಲೋತ್ಸವ ಹಮ್ಮಿಕೊಂಡಿರುವುದು ಖುಷಿ ನೀಡಿದೆ ಎಂದು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ.ಕ.ಜಿಲ್ಲಾ ಆಯಕ್ತ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಆಳ್ವಾಸ್‌ನಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ 19 ಸ್ಥಳೀಯ ಸಂಸ್ಥೆಗಳಿಂದ 1400 ಪ್ರತಿನಿಧಿಗಳು ಆಗಮಿಸಿದ್ದು, ಭಾರತ್ ಸ್ಕೌಟ್ಸ್ ಗೈಡ್ಸ್‌ನ ಪ್ರತಿ ವಿದ್ಯಾರ್ಥಿಯನ್ನು ಈ ದೇಶದ ಸಂಪತ್ತಾಗಿ ಪರಿವರ್ತಿಸುವ ನೆಲೆಯಲ್ಲಿ ಕೆಲಸ ನಿರ್ವಹಿಸಬೇಕಿದೆ ಎಂದರು.

ಕಬ್ಸ್-ಬುಲ್‌ಬುಲ್ಸ್, ರೋವರ್-ರೇಂಜರ್ಸ್‌, ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳಿಗೆ ಸಮೂಹ ಹಾಗೂ ವೈಯಕ್ತಿಕ ಸ್ಪರ್ಧೆಗಳ ವಿಭಾಗದಲ್ಲಿ ದೇಶಭಕ್ತಿ ಗೀತೆ, ಜಾನಪದ ಗೀತೆ, ಜಾನಪದ ನೃತ್ಯ, ಕಿರುಪ್ರಹಸನ, ಅಭಿನಯ ಗೀತೆ, ಕಥೆ ಹೇಳುವುದು, ಚಿತ್ರಕಲೆ, ಶಾಸ್ತ್ರೀಯ ಸಂಗೀತ, ಆಶುಭಾಷಣ, ಪ್ರಬಂಧ, ಭಾವಗೀತೆ, ರಂಗೋಲಿ, ಮಿಮಿಕ್ರಿ, ಶಾಸ್ತ್ರೀಯ ನೃತ್ಯ ಹಾಗೂ ಕ್ಲೇ ಮಾಡಲಿಂಗ್ ಸ್ಪರ್ಧೆಗಳು ನಡೆದವು.

ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ಕಾರ್ಯದರ್ಶಿ ಪ್ರತಿಮ್ ಕುಮಾರ್, ಜತೆ ಕಾರ್ಯದರ್ಶಿ ಜಯವಂತಿ ಸೋನ್ಸ್, ಜಿಲ್ಲಾ ಕೋಶಾಧಿಕಾರಿ ನವೀನಚಂದ್ರ ಅಂಬೂರಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್ ಕೆ., ಮೂಡುಬಿದಿರೆ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಭಾರತಿ ನಾಯಕ್ ಇದ್ದರು.

ಬಹುಮಾನ

ಕಬ್ಸ್-ಬುಲ್‌ಬುಲ್ಸ್ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ (ಪ್ರ), ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ (ದ್ವಿ), ಬೆಥನಿ ಆಂಗ್ಲ ಮಾಧ್ಯಮ ಶಾಲೆ (ತೃ), ಸ್ಕೌಟ್ಸ್ ಗೈಡ್ಸ್‌ನಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ (ಪ್ರ), ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಆಳ್ವಾಸ್ ಸೆಂಟ್ರಲ್ ಶಾಲೆ ದ್ವಿತೀಯ ಸ್ಥಾನ ಹಂಚಿಕೊಂಡವು. ರೋವರ್-ರೇಂಜರ್ಸ್‌ ವಿಭಾಗದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು (ಪ್ರ), ಆಳ್ವಾಸ್ ಪದವಿ ಕಾಲೇಜು (ದ್ವಿ) ಸ್ಥಾನ ಪಡೆದುಕೊಂಡಿತು.