ತುಮಕೂರು: ಇಂದಿನ ದುಬಾರಿ ಯುಗದಲ್ಲಿ ಶಿಕ್ಷಣ ಪಡೆಯುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವರ್ಗದ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು, ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಗೌರವಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಉದಯವಾಗುತ್ತಿರುವ ಸಮೃದ್ಧಿ ಶಿಕ್ಷಣ ಟ್ರಸ್ಟ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಗೌಡಗೆರೆ ಮಠದ ಡಾ.ಮಲ್ಲೆಶ್ ಸ್ವಾಮೀಜಿ ಆಶಿಸಿದರು.
ನಗರದ ಚಿಕ್ಕಪೇಟೆಯಲ್ಲಿ ಸೋಮವಾರ ಸಮೃದ್ಧಿ ಶಿಕ್ಷಣ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯೆನಿಸಿದೆ. ಆರ್ಥಿಕ ಸಂಕಷ್ಟ ಹೊಂದಿರುವ ಕುಟುಂಬಗಳು ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗದ ಸ್ಥಿತಿ ಇದೆ, ಇಂಥ ಬಡ ಕುಟುಂಬಗಳ ಮಕ್ಕಳ ಶಿಕ್ಷಣ ಕ್ಕೆ ನೆರವಾಗುವ ಕೆಲಸಕ್ಕೆ ಮುಂದಾಗಿರುವ ಸಮೃದ್ಧಿ ಶಿಕ್ಷಣ ಟ್ರಸ್ಟ್ನ ಚಿಂತನೆ ಉತ್ತಮವಾಗಿದೆ ಎಂದರು.
ಟ್ರಸ್ಟ್ನ ಅಧ್ಯಕ್ಷ ಬೆಂಳಗುಂಬ ವೆಂಕಟೇಶ್ ಮಾತನಾಡಿ, ಸಾಮಾಜಿಕ ಕಾರ್ಯ ಮಾಡುವ ನಿಟ್ಟಿನಲ್ಲಿ ಸಮಾನ ಮನಸ್ಕರು ಸೇರಿ ಈ ಸಮೃದ್ಧಿ ಶಿಕ್ಷಣ ಟ್ರಸ್ಟ್ ಆರಂಭಿಸಲಾಗಿದೆ, ಬಡ ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಆರ್ಥಿಕ ನೆರವು, ನೋಟ್ ಬುಕ್ ಸೇರಿದಂತೆ ಅಗತ್ಯ ಪರಿಕರ ವಿತರಿಸುವ ಜತೆಗೆ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಟ್ರಸ್ಟ್ನ ಕಾರ್ಯದರ್ಶಿ ನಾಗರಾಜು, ಉಪಾಧ್ಯಕ್ಷ ನಂಜುಂಡಯ್ಯ, ಖಜಾಂಚಿ ನಾಗರಾಜು, ಟ್ರಸ್ಟಿಗಳಾದ ಹರೀಶ್, ಸುನೀಲ್, ನಾಗರಾಜು, ಕುಮಾರ್, ನರಸಿಂಹರಾಜು ಇನ್ನಿತರರು ಇದ್ದರು.