ಶಶಿ ಕುತ್ಯಾಳ ಈಶ್ವರಮಂಗಲ
ಸಂಪ್ಯ ಪೊಲೀಸ್ ಠಾಣೆಗೆ ಸಂಬಂಧಿಸಿದ ಈಶ್ವರಮಂಗಲ ಪೊಲೀಸ್ ಹೊರಠಾಣೆಗೆ ಈಶ್ವರಮಂಗಲ ಪೇಟೆ ಸಮೀಪದಲ್ಲೇ 50 ಸೆಂಟ್ಸ್ ಜಾಗ ಮಂಜೂರಾಗಿ ಇಲಾಖೆ ಹೆಸರಿನಲ್ಲಿ ಜಾಗದ ಪಹಣಿ ಪತ್ರವೂ ಆಗಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಕಾದಿರಿಸಿ ಹಲವು ವರ್ಷಗಳು ಕಳೆದರೂ ಈ ತನಕ ಸ್ವಂತ ಕಟ್ಟಡದ ಯೋಗ ಕೂಡಿಬಂದಿಲ್ಲ.
14 ವರ್ಷಗಳಿಂದ ಬಾಡಿಗೆ ಕೊಠಡಿಯಲ್ಲಿ ಅತಂತ್ರ ಸ್ಥಿತಿಯಲ್ಲಿ ಕಾರ್ಯಾಚರಿಸುತ್ತಿದ್ದ ಈಶ್ವರಮಂಗಲ ಪೊಲೀಸ್ ಠಾಣೆ ಇದೀಗ ಸ್ಥಳ ಬದಲಾವಣೆಯಾಗಿದೆ. ಆದರೆ ಇಲ್ಲಿನ ಆರಕ್ಷಕರಿಗೆ ಮತ್ತೆ ಬಾಡಿಗೆ ಕಟ್ಟಡವೇ ಗತಿಯಾಗಿದೆ. ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಈಶ್ವರಮಂಗಲ ಶಾಖಾ ಕಟ್ಟಡದ ತಳಹಂತಸ್ತಿನಲ್ಲಿ 4 ಕೊಠಡಿಗಳನ್ನು ಬಾಡಿಗೆಗೆ ಪಡೆದು 2011ನೇ ಅಕ್ಟೋಬರ್ ತಿಂಗಳಲ್ಲಿ ಈಶ್ವರಮಂಗಲ ಪೊಲೀಸ್ ಹೊರಠಾಣೆ ಆರಂಭಿಸಲಾಗಿತ್ತು. ಇತ್ತೀಚಿನ ತನಕ ಅದೇ ಕಟ್ಟಡದಲ್ಲಿ ಉಳಿದುಕೊಂಡಿತ್ತು. ಇದೀಗ ಅನಿವಾರ್ಯತೆ ಹಿನ್ನೆಲೆಯಲ್ಲಿ ಹೊರ ಠಾಣೆಯನ್ನು ಅಲ್ಲಿಂದ ಈಶ್ವರಮಂಗಲ ಸುಳ್ಯಪದವು ರಸ್ತೆಯ ಗೋಳಿತ್ತಡಿ ಎಂಬಲ್ಲಿರುವ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂದ ಆಡಳಿತ ಮಂಡಳಿ ಈಶ್ವರಮಂಗಲ ಶಾಖಾ ಕಟ್ಟಡದಲ್ಲಿ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ 2017ರಲ್ಲಿಯೇ ಕಟ್ಟಡ ಬಿಟ್ಟು ಕೊಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಆದರೆ ಪರ್ಯಾಯ ವ್ಯವಸ್ಥೆ ಆಗದ ಕಾರಣ ಮತ್ತೆ ಬಾಡಿಗೆ ಚೀಟಿ ಅವಧಿ ವಿಸ್ತರಿಸಿದ್ದರು. ಆ ಬಳಿಕವೂ ಹಲವು ಬಾರಿ ಕಟ್ಟಡ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದ್ದ ಸಂಘ ಆಡಳಿತ ಮಂಡಳಿ ಕಳೆದ 2024ನೇ ಜುಲೈ 31ಕ್ಕೆ ಬಾಡಿಗೆ ಚೀಟಿ ಅವಧಿ ಕೊನೆಗೊಂಡ ಬಳಿಕ ಕಟ್ಟಡ ಬಿಟ್ಟುಕೊಡುವಂತೆ ಇಲಾಕೆಗೆ ನೋಟಿಸ್ ಜಾರಿಗೊಳಿಸಿತ್ತು. ಆದರೂ ಹೊಠ ಠಾಣೆಗೆ ಸೂಕ್ತ ಬಾಡಿಗೆ ಕಟ್ಟಡ ಲಭಿಸದಿದ್ದ ಹಿನ್ನೆಲೆಯಲ್ಲಿ ಮತ್ತೆ ಒಂದು ವರ್ಷ ಅಲ್ಲೇ ಉಳಿಯುವಂತಾಯಿತು.
ಈ ನಡುವೆ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಕಟ್ಟಡ ಬಿಟ್ಟುಕೊಡುವಂತೆ ಜಿಲ್ಲಾ ಎಸ್ಪಿಗೆ ಮನವಿ ಮಾಡಿದ್ದರು. ಕಳೆದ 11 ತಿಂಗಳ ಬಾಡಿಗೆ ಚೀಟಿ ಅವಧಿ ಮುಗಿದ ಬಳಿಕ ಬಾಡಿಗೆ ಚೀಟಿಯ ನವೀಕರಣ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಸೂಚನೆಯಂತೆ ಹೊಠ ಠಾಣೆಯನ್ನು ಸ್ಥಳಾಂತರಿಸುವ ಕಾರ್ಯ ಕೆಲ ದಿನಗಳ ಹಿಂದೆ ನಡೆದಿದೆ.
ಕೊರತೆಗಳಿಗೂ ಸಿಕ್ಕಿಲ್ಲ ಮುಕ್ತಿ
ಹೊರ ಠಾಣೆಯಲ್ಲಿ ಎಎಸ್‌ಐ ಸೇರಿದಂತೆ ಒಟ್ಟು 9 ಹುದ್ದೆಗಳಿದ್ದರೂ ಈಗ ಇರುವುದು ಒಬ್ಬರು ಎಎಸ್‌ಐ, ಒಬ್ಬರು ಹೆಡ್‌ಕಾನ್‌ಸ್ಟೆಬಲ್ ಮತ್ತು ಇಬ್ಬರು ಕಾನ್‌ಸ್ಟೆಬಲ್ ಮಾತ್ರ. ಹೊರ ಠಾಣಾ ವ್ಯಾಪ್ತಿಯ ನೆಟ್ಟಣಿಗೆ ಮುಡ್ನೂರು ಮತ್ತು ಪಡುವನ್ನೂರು ಕರ್ನಾಟಕ - ಕೇರಳ ಗಡಿಪ್ರದೇಶ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾಗಿವೆ. ಕೋಮುಸೂಕ್ಷ್ಮ ಪ್ರದೇಶಗಳನ್ನು ಕೂಡ ಈ ಠಾಣಾ ವ್ಯಾಪ್ತಿ ಒಳಗೊಂಡಿದೆ. ಹಾಗಾಗಿ ಸಿಬ್ಬಂದಿ ಕೊರತೆ ನೀಗಿಸುವುದು ಮತ್ತು ಇಲ್ಲಿನ ಪೊಲೀಸರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವುದು ಅನಿವಾರ್ಯ ಎಂಬುದು ಜನತೆಯ ಅಭಿಪ್ರಾಯ.
ಶಾಸಕರಿಗೆ ಗ್ರಾಮಸ್ಥರ ಆಗ್ರಹ
ಈಶ್ವರಮಂಗಲ ಹೊರಠಾಣೆಗೆ ಸ್ವಂತ ಕಟ್ಟಡದ ಅವಶ್ಯಕತೆಯಿದೆ. ನೂತನ ಕಟ್ಟಡ ನಿರ್ಮಾಣ ಮಾಡಲು ಅನುದಾನ ಒದಗಿಸುವಂತೆ ಗೃಹಸಚಿವರ ಜತೆ ಮಾತನಾಡುತ್ತೇನೆ. ಸಿಬ್ಬಂದಿ ಕೊರತೆ ನೀಗಿಸುವ ಬಗ್ಗೆಯೂ ಪ್ರಯತ್ನಿಸುತ್ತೇನೆ ಎಂದು ಶಾಸಕ ಅಶೋಕ್‌ಕುಮಾರ್ ರೈ ತಿಳಿಸಿದ್ದರು. ಈ ವಿಚಾರದಲ್ಲಿ ಶಾಸಕರು ಹೆಚ್ಚಿನ ಕಾಳಜಿ ವಹಿಸಬೇಕು. ಸಿಬ್ಬಂದಿ ಹಾಗೂ ವಾಹನದ ಕೊರತೆ ನೀಗಿಸಬೇಕು ಎಂಬುವುದು ಈ ಭಾಗದ ಗ್ರಾಮಸ್ಥರ ಆಗ್ರಹ.
ಈಶ್ವರಮಂಗಲ ಪೊಲೀಸ್ ಹೊಠ ಠಾಣಾ ಸಿಬ್ಬಂದಿ ಕೊರತೆ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ನೆಟ್ಟಣಿಗೆ ಮುಡ್ನೂರು ಗ್ರಾಪಂನಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದೇವೆ. ಈ ಹಿಂದೆಯೇ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ಶಾಸಕ ಅಶೋಕ್‌ಕುಮಾರ್ ರೈ ಅವರಿಂದ ಅನುದಾನ ಒದಗಿಸುವ ಭರವಸೆ ಸಿಕ್ಕಿದೆ. ಫೌಝಿಯಾ ಇಬ್ರಾಹಿಂ ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ