ಪುತ್ತೂರು: ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಕರ್ನಾಟಕ ಪೊಲೀಸರು ಕೇರಳದಲ್ಲಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಸಮೀಪ ಬಾಡೂರು ಸಮೀಪದ ನಿವಾಸಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಶಂಕಿತ ಆರೋಪಿ ಬಾಡೂರು ಬಳಿ ಸಾರ್ವಜನಿಕ ಸಂಸ್ಥೆಯೊಂದರಲ್ಲಿ ಕುಳಿತುಕೊಂಡಿದ್ದ ವೇಳೆ ಕರ್ನಾಟಕ ಪೊಲೀಸರ ತಂಡ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಕೇರಳ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.
ಮೂರು ವಾರಗಳ ಹಿಂದೆ ತಡ ರಾತ್ರಿ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ತೋಟದಮೂಲೆ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ೫ ಕ್ಕಿಂತ ಹೆಚ್ಚು ಜನರಿದ್ದ ದರೋಡೆಕೋರರ ತಂಡ ಮನೆಯಲ್ಲಿದ್ದ ತಾಯಿ ಮತ್ತು ಮಗನನ್ನು ಕಟ್ಟಿ ಹಾಕಿ ೩೦ ಸಾವಿರ ರೂಪಾಯಿ ನಗದು ಹಾಗೂ ಅಂದಾಜು ಎರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ನಡೆಸಿದ್ದರು.
ತೋಟದಮೂಲೆ ನಿವಾಸಿ ಕಸ್ತೂರಿ ರೈ ಹಾಗೂ ಅವರ ಪುತ್ರ ಗುರು ಪ್ರಸಾದ್ ರೈಯವರನ್ನು ಕಟ್ಟಿ ಹಾಕಿ ಕೃತ್ಯ ನಡೆಸಲಾಗಿತ್ತು. ತಡ ರಾತ್ರಿ ೨ ಗಂಟೆಗೆ ಮನೆಗೆ ನುಗ್ಗಿದ್ದ ದರೋಡೆಕೋರರ ತಂಡ ಸರಿ ಸುಮಾರು ಎರಡೂವರೆ ಗಂಟೆ ಕಾಲ ಮನೆಯನ್ನು ಜಾಲಾಡಿ ಕೃತ್ಯ ನಡೆಸಿತ್ತು. ದರೋಡೆಕೋರರು ಕೈ ಯಲ್ಲಿ ಮಾರಾಕಾಯುದ್ದಗಳನ್ನು ಹಿಡಿದುಕೊಂಡಿದ್ದರು ಹಾಗೂ ಮನೆಯಲ್ಲಿದ್ದ ಮೊಬೈಲ್ ಪೋನ್ ಗಳನ್ನು ನೀರಲ್ಲಿ ಹಾಕಿ, ಬೈಕ್ ನ ಕೀ ಹಾಗೂ ಟಾರ್ಚ್ ಹಿಡಿದುಕೊಂಡು ಪರಾರಿಯಾಗಿದ್ದರು.