ಸಿದ್ದಾಪುರ: ಅರಣ್ಯ, ಪರಿಸರವನ್ನು ಉಳಿಸಿ ಬೆಳೆಸುವುದರ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿ ತ್ಯಾಜ್ಯಮುಕ್ತ ಪರಿಸರ ನಿರ್ಮಾಣ ಮಾಡಬೇಕೆಂದು ಸಂಪ್ರಭಾ ಫೌಂಡೇಷನ್ ಸಂಚಾಲಕ ಎಂ.ಸಿ.ಚಂದನ್ ಕರೆ ನೀಡಿದರು.
ವಿರಾಜಪೇಟೆ ತಾಲೂಕಿನ ಮಾಲ್ದಾರೆ ಅರಣ್ಯ ವ್ಯಾಪ್ತಿಯ ಚೆಕ್‌ಪೋಸ್ಟ್‌ನಿಂದ ಲಿಂಗಾಪುರ ಚೆಕ್‌ಪೋಸ್ಟ್‌ವರೆಗೆ ಅಂದಾಜು 5 ಕಿ.ಮೀ. ಅರಣ್ಯದ ಅಂಚಿನ ರಸ್ತೆ ಬದಿಯ ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸುವ ಸ್ವಚ್ಛತಾ ಜಾಗೃತಿ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕೊಡಗು ಜಿಲ್ಲೆಯ ಪರಿಸರವನ್ನು ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಅರಣ್ಯ ವ್ಯಾಪ್ತಿಯ ರಸ್ತೆಗಳು ಸೇರಿದಂತೆ ಜಿಲ್ಲೆಯ ಬಹುತೇಕ ರಸ್ತೆ ಬದಿಗಳಲ್ಲಿ ಕಾಳಜಿ ಮರೆತು ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಇತರ ನಿರುಪಯುಕ್ತ ವಸ್ತುಗಳನ್ನು ಎಸೆಯಲಾಗುತ್ತಿರುವುದರಿಂದ ಪರಿಸರಕ್ಕೆ ಹಾನಿಯಾಗುವ ಮೂಲಕ ಪ್ರಾಣಿ ಪಕ್ಷಿಗಳಿಗೂ ಮಾರಕವಾಗಲಿದೆ. ನದಿ ಮೂಲಗಳು ಕಲುಷಿತಗೊಳ್ಳುತ್ತಿರುವುದರಿಂದ ಮಾನವ ಹಾಗೂ ಪ್ರಾಣಿ ಪಕ್ಷಿಗಳಿಗೂ ಸಂಚಕಾರ ಎದುರಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲೂ ತ್ಯಾಜ್ಯ ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ತ್ಯಾಜ್ಯ, ಪ್ಲಾಸ್ಟಿಕ್‌ಮುಕ್ತ ಕೊಡಗು ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಸ್ವಚ್ಛತಾ ಆಂದೋಲನದಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಜನಪರ ಸಂಘ, ಡೊಮಿನೊಸ್ ಸಂಘ, ಸಂಜೀವಿನಿ ಒಕ್ಕೂಟ, ಬಿಸ್ಲೇರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.