ಕಲಬುರಗಿ: ನಗರದ ಎಸ್.ಎಂ. ಪಂಡಿತ ರಂಗಮಂದಿರದಿಂದ ಗುಲ್ಬರ್ಗ ವಿಶ್ವವಿದ್ಯಾಲಯದ ಸಮ್ಮೇಳನ ವೇದಿಕೆವರೆಗೆ 5 ರಂದು ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಭವ್ಯ ಮೆರವಣಿಗೆ ಜರುಗಲಿದೆ.
ಜಿಲ್ಲಾಧಿಕಾರಿ ಶರತ್ ಬಿ. ಅವರು ಸಮ್ಮೇಳಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿಲಿದ್ದಾರೆ. ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಿಂದ ಆರಂಭಗೊಂಡ ಮೆರವಣಿಗೆ ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ಬಲಕ್ಕೆ ತಿರುಗಿ ರಿಂಗ್ ರಸ್ತೆ ಮೂಲಕ ಕುಸನೂರ ರಸ್ತೆಯ ಮಾರ್ಗದಿಂದ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದ ಪ್ರಧಾನ ವೇದಿಕೆಗೆ ತಲುಪಲಿದೆ.
ಜಿಲ್ಲೆಯ 23 ಕಲಾ ತಂಡಗಳು ಸೇರಿ ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಂಗಳೂರ, ಚಿತ್ರದುರ್ಗ, ತುಮಕೂರ, ದಾವಣಗೆರೆ, ಧಾರವಾಡ, ಬಳ್ಳಾರಿ, ಬಾಗಲಕೋಟೆ, ಮಂಡ್ಯ, ರಾಯಚೂರು, ಶಿವಮೊಗ್ಗ, ಹಾಸನ, ಆಂಧ್ರ ಗಡಿನಾಡು ಘಟಕ, ಹಾಸನ, ಉಡುಪಿ ಸೇರಿ ವಿವಿಧ ಜಿಲ್ಲೆಗಳ ಒಟ್ಟು 60 ಕಲಾ ತಂಡಗಳು ಭಾಗವಹಿಸಲಿವೆ. ಡೊಳ್ಳು ಕುಣಿತ, ಹಲಿಗೆ ವಾದನ, ದೊಡ್ಡಾಟ ಕುಣಿತ, ಕರಡಿ ಮಜಲು ಕುಣಿತ ಮತ್ತು ಚಮವಾದ್ಯ, ಲಂಬಾಣಿ ಕುಣಿತ, ಪುರವಂತಿಕೆ ಕುಣಿತ, ಹೆಜ್ಜೆಮೇಳ, ರಣ ಹಲಗೆ, ಗೊಂಬೆ ಕುಣಿತ, ಪೋತರಾಜ ಕುಣಿತ, ಭಜನಾ ಮಂಡಳಿ, ವಲಯ ಮಾದೇಶ್ವರ ಬೀಸು ಕಂಸಾಳೆ, ವಿರಗಾಸೆ ಕುಣಿತ, ಕೊಂಬು ಕಹಳೆ, ಸಂಬಳ ವಾಧ್ಯ, ಮೋಜಿನ ಕುಣಿತ ಸಮರ ಕಲೆ, ಕತ್ತಿ ವರಸೆ, ದಾಲಿಪಟ ಸಾಧನ, ಮುಳ್ಳಿನ ಚಕ್ರ, ವೀರಭದ್ರನ ಕುಣಿತ, ನಗಾರಿ, ಜಾನಪದ ನೃತ್ಯ, ಕಿಲು ಕುಣಿತ, ಗಾರುಡಿ ಗೊಂಬೆ, ಹಗಲು ವೇಷಧಾರಿ ಕುಣಿತ, ಸಮಳಾ ಮತ್ತು ನಂದಿಕೂಲು, ಝಾಂಚ್ ಪಥಕ, ಸೋಮನ ಕುಣಿತ, ಗೋರವರ ಕುಣಿತ, ತಮಟೆ ಬೇಸ್ ಡ್ರಮ್, ಬೆಟ್ಟಮೇಳ ಕಲೆ, ನಾಸಿಕ ಡೋಲ, ಯಕ್ಷಗಾನ ಸೇರಿ ವಿವಿಧ ತಂಡಗಳು ಪಾಲ್ಗೊಳ್ಳಲಿವೆ.