ಮಡಿಕೇರಿ:
ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಒಳಮೀಸಲು ಸಮೀಕ್ಷೆ ಸೋಮವಾರದಿಂದ (ಮೇ5) ಆರಂಭವಾಗಲಿದೆ. ಉಪ ವರ್ಗೀಕರಣಕ್ಕೆ ಅಗತ್ಯ ದತ್ತಾಂಶ ಸಂಗ್ರಹಿಸುವ ನಿಟ್ಟಿನಲ್ಲಿ ಈ ಸಮೀಕ್ಷೆ ಮಹತ್ವದ್ದಾಗಿದ್ದು, ಸಮೀಕ್ಷೆದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡ ಅಗತ್ಯ ಸಿದ್ಧತೆಗಳನ್ನು ನಡೆಸಿದ್ದು, ಗಣತಿದಾರರಾಗಿ ಕಾರ್ಯನಿರ್ವಹಿಸುವ ಶಿಕ್ಷಕರು ಮತ್ತು ಮೇಲ್ವೀಚಾರಕರಿಗೆ ಈಗಾಗಲೇ ಅಗತ್ಯ ತರಬೇತಿ ಕೂಡ ನೀಡಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿರುವ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಔದೋಗ್ಯಿಕ ಪ್ರಾತಿನಿಧ್ಯ ಒಳಗೊಂಡAತೆ ಅವರ ಸ್ಥಿತಿಗತಿಗಳನ್ನು ತಿಳಿಯುವ ಉದ್ದೇಶದಿಂದ ನಡೆಸಲಾಗುತ್ತಿರುವ ಈ ಸಮೀಕ್ಷೆ ಉಪ ವರ್ಗೀಕರಣಕ್ಕೆ ಅಗತ್ಯ ದತ್ತಾಂಶ ಸಂಗ್ರಹಿಸುವ ನಿಟ್ಟಿನಲ್ಲೂ ಮಹತ್ವ ಪಡೆದುಕೊಂಡಿದೆ. ಸೋಮವಾರದಿಂದ (ಮೇ5) ಮೇ 17ರ ತನಕ ಮನೆ ಮನೆಗೆ ತೆರಳಲಿರುವ ಸಮೀಕ್ಷೆದಾರರು ಅಗತ್ಯ ಮಾಹಿತಿ ಸಂಗ್ರಹಿಸಲಿದ್ದಾರೆ. ನಂತರ ಮೇ 19ರಿಂದ 21ರ ತನಕ ವಿಶೇಷ ಶಿಬಿರ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತದೆ.
ಬಹಳ ವಿಶೇಷವಾಗಿ ನಡೆಯುತ್ತಿರುವ ಈ ಸಮೀಕ್ಷಾ ಕಾರ್ಯದಲ್ಲಿ ಗಣತಿದಾರರಾಗಿ ಬಹುತೇಕ ಶಿಕ್ಷಕರೇ ಕಾರ್ಯನಿರ್ವಹಿಸುತ್ತಿದ್ದು, ಗಣತಿದಾರರ ಪಾತ್ರ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸಮೀಕ್ಷೆ ಕಾಟಾಚಾರಕ್ಕೆ ನಡೆಯದೆ ಪರಿಣಾಮಕಾರಿಯಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಗಣತಿದಾರರಾಗಿ ಕಾರ್ಯನಿರ್ವಹಿಸುವ ಶಿಕ್ಷಕರು ಮತ್ತು ಇವರ ಮೇಲ್ವಿಚಾರಕರಿಗೆ ಹಲವು ಸುತ್ತಿನ ತರಬೇತಿಗಳನ್ನು ಆಯೋಜಿಸುವ ಮೂಲಕ ಸಮೀಕ್ಷೆ ಯಶಸ್ವಿಗೊಳಿಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.
ಈ ಸಮೀಕ್ಷಾ ಕಾರ್ಯದಲ್ಲಿ ಗಣತಿದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹಾಗಾಗಿ ಸಮೀಕ್ಷೆದಾರರು ನಿಷ್ಠೆಯಿಂದ ಸಕ್ರಿಯವಾಗಿ ಭಾಗವಹಿಸಿ ಸಮೀಕ್ಷೆ ಪೂರ್ಣಗೊಳಿಸಬೇಕಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಮೊದಲು ತಮಗೆ ವಹಿಸಿದ ಪ್ರದೇಶದಲ್ಲಿನ ಹಿರಿಯ ಮತ್ತು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ಭೇಟಿಯ ಉದ್ದೇಶವನ್ನು ನಿವಾಸಿಗಳಿಗೆ ವಿವರಿಸುವ ಮೂಲಕ ಅವರೊಂದಿಗೆ ನಿಕಟ ಸೌಹಾರ್ದತೆ ಹೊಂದಬೇಕು ಎನ್ನುವ ಸೂಚನೆ ನೀಡಲಾಗಿದೆ.
ಸಮೀಕ್ಷೆ ಕಾರ್ಯಕ್ಕೆ ಹೋಗುವ ಎಲ್ಲಾ ಸಮಯದಲ್ಲಿ ಗುರುತಿನ ಚೀಟಿಯನ್ನು ಕೊರಳಲ್ಲಿ ತಪ್ಪದೇ ಧರಿಸಿರಬೇಕು. ಯಾವುದೇ ಕುಟುಂಬವನ್ನು ಸಂದರ್ಶಿಸಿ, ಪ್ರಶ್ನಾವಳಿಯಲ್ಲಿನ ಪ್ರಶ್ನೆಗಳನ್ನು ಕೇಳುವಾಗ ಅವಸರ ಮಾಡಬಾರದು. ಯಾವಾಗಲೂ ನಗುಮುಖ ಮತ್ತು ಸೌಜನ್ಯಪೂರ್ವಕವಾಗಿ ವರ್ತಿಸಬೇಕು. ಗಣತಿದಾರರ ಭೇಟಿಯ ಉದ್ದೇಶವನ್ನು ಮನೆಯ ಸದಸ್ಯರಿಗೆ ಸಂಕ್ಷಿಪ್ತವಾಗಿ ವಿವರಿಸಿ ಕಿರು ಪರಿಚಯದ ನಂತರ ಕಾರ್ಯಕ್ಕೆ ಇಳಿಯಬೇಕು ಎನ್ನುವ ಸಲಹೆ ಗಣತಿದಾರರಿಗೆ ನೀಡಲಾಗಿದೆ.
ಸ್ನೇಹಪೂರ್ವಕ ಮತ್ತು ವಿವೇಚನಾಯುತ ನಡೆ-ನುಡಿಗಳು ಹಾಗೂ ವಿನಯಪೂರ್ವಕವಾಗಿ ಆಡಿದ ಕೆಲವು ಒಳ್ಳೆಯ ಮಾತುಗಳು ಕುಟುಂಬ ಸದಸ್ಯರಿಗೆ ನಿರಾಳತೆಯನ್ನು ನೀಡಿ, ಅವರು ಸರಿಯಾದ ಉತ್ತರ ನೀಡಲು ಅನುಕೂಲವಾಗುತ್ತದೆ. ಗಣತಿದಾರರಿಗೆ ಸೂಚನಾ ಕೈಪಿಡಿ ಕೊಡಲಾಗಿದ್ದು, ಮೊಬೈಲ್ ಆಪ್‌ನಲ್ಲಿ ಸಮೀಕ್ಷೆಯಲ್ಲಿನ ಮಾಹಿತಿ ತುಂಬುವ ಕುರಿತು ವಿಸ್ತೃತ ಮಾರ್ಗದರ್ಶಿಯಾಗಿ ಆ ಕೈಪಿಡಿ ಕೆಲಸ ಮಾಡುತ್ತದೆ.
ಸಮೀಕ್ಷೆಗೆ ಸಂಬAಧಿಸಿದ ನಮೂನೆಗಳನ್ನು ಭರ್ತಿ ಮಾಡುವಾಗ ಸಾಮಾನ್ಯವಾಗಿ ಉದ್ಭವವಾಗಬಹುದಾದ ಎಲ್ಲಾ ಸಮಸ್ಯೆಗಳ ಬಗ್ಗೆಯೂ ವಿವರ ನೀಡಲು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಯಾವುದೇ ರೀತಿಯ ಸಂದೇಹ ನಿವಾರಣೆಗಾಗಿ ಮೇಲ್ವಿಚಾರಕರು ಅಥವಾ ಸಂಪನ್ಮೂಲ ವ್ಯಕ್ತಿಯನ್ನು ಸಂಪರ್ಕಿಸಲು ತಿಳಿಸಲಾಗಿದೆ. ತರಬೇತಿಗೆ ಹಾಜರಾದಾಗ ಸಂದರ್ಭ ಮೇಲ್ವಿಚಾರಕರು ಮತ್ತು ಸಂಪನ್ಮೂಲ ವ್ಯಕ್ತಿಯ ಮೊಬೈಲ್ ಸಂಖ್ಯೆ ಗಣತಿದಾರರಿಗೆ ಕೊಡಲಾಗಿದೆ.
ಮೊಬೈಲ್ ಆಪ್ ನಲ್ಲಿಯ ಅಂಶ ಅಥವಾ ಕಾಲಂಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಭರ್ತಿ ಮಾಡುವ ಬಗ್ಗೆ ಮಾರ್ಗದರ್ಶಿ ಕೈಪಿಡಿಯಲ್ಲಿ ಸವಿಸ್ತಾರವಾಗಿ ವಿವರ ಕೊಡಲಾಗಿದೆ. ಈ ಸೂಚನೆಗಳ ಪರಿಚಯಮಾಡಿಕೊಂಡು ಸಮೀಕ್ಷಾ ಕಾರ್ಯ ನಡೆಸುವಂತೆ ಸಲಹೆ ನೀಡಲಾಗಿದೆ. ಸೂಚನೆಗಳನ್ನು ಪೂರ್ಣವಾಗಿ ಮತ್ತು ಸ್ಪಷ್ಟವಾಗಿ ತಿಳಿದುಕೊಂಡ ಮೇಲೆ ಕುಟುಂಬದ ಅನುಸೂಚಿಯನ್ನು ನೈಜವಾಗಿ ಹಾಗೂ ಪ್ರಾಮಾಣಿಕವಾಗಿ ಭರ್ತಿ ಮಾಡುವುದರ ಮೇಲೆ ಸಮೀಕ್ಷೆಯ ಯಶಸ್ಸು ಅವಲಂಬಿಸಿದೆ ಎನ್ನುವುದರ ಬಗ್ಗೆ ಗಣತಿದಾರರಿಗೆ ಅರಿವು ಮೂಡಿಸಲಾಗಿದೆ.
ಗಣತಿದಾರರಿಗೆ ಮತದಾರರ ಪಟ್ಟಿ ನೀಡಲಾಗಿದ್ದು, ಆ ಪಟ್ಟಿಯಲ್ಲಿ ಇರುವ ಮನೆಗಳ ಸಂಖ್ಯೆ ಆಧಾರದಲ್ಲಿ ಸಮೀಕ್ಷಾ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಗಣತಿದಾರರು ಭೇಟಿ ಕೊಡಲಿದ್ದಾರೆ. ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಗುರುತಿಸಿ, ಯಾವ ದಿನದಂದು, ಯಾವ ಯಾವ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂಬ ಮಾಹಿತಿಯನ್ನು ಆದಷ್ಟು ಮಟ್ಟಿಗೆ ಮುಂಚಿತವಾಗಿಯೆ ಗ್ರಾಮಸ್ಥರಿಗೆ ತಿಳಿಸಬೇಕು. ಇದಕ್ಕಾಗಿ ಪಂಚಾಯತ್ ಅಭಿವೃದ್ದಿ ಅಧಿಕಾರಿ (ಪಿಡಿಒ), ಗ್ರಾಮದ ಗ್ರಾಮ ಲೆಕ್ಕಿಗ, ಪಂಚಾಯತ್ ಬಿಲ್ ಕಲೆಕ್ಟರ್, ಅಂಗನವಾಡಿ ಕಾರ್ಯಕರ್ತರು ಹಾಗೂ ಇತರರ ನೆರವನ್ನು ಪಡೆದುಕೊಳ್ಳಬಹುದಾಗಿದೆ.
ಸಮೀಕ್ಷೆಯ ಸಂದರ್ಭ ಪರಿಶಿಷ್ಟ ಜಾತಿಯವರ ಯಾವುದೇ ಮನೆಯನ್ನು ಬಿಡಬಾರದು. ಪ್ರತಿಯೊಂದು ಮನೆಗೆ ಭೇಟಿ ನೀಡಿ ಅಲ್ಲಿರುವ ಪ್ರತಿಯೊಂದು ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಮೊಬೈಲ್ ಆಪ್‌ನಲ್ಲಿ ಭರ್ತಿ ಮಾಡಬೇಕು. ಸಮೀಕ್ಷೆ ನಡೆಸುವಾಗ ಸಮೀಕ್ಷೆ ಬ್ಲಾಕಿನ ಅಧಿಕೃತ ಭಾಗವಾಗಿರುವ ಯಾವುದೇ ಮನೆಯನ್ನು ಬಿಡಬಾರದು. ಗಣತಿದಾರರ ಭೇಟಿಯ ಸಮಯದಲಿ ಅನಿವಾರ್ಯ ಕಾರಣಗಳಿಂದ ಒಂದು ಇಡೀ ಕುಟುಂಬವೇ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದಲ್ಲಿ ಸಮೀಕ್ಷೆಯ ಕಾಲಾವಧಿಯಲ್ಲೇ ಇನ್ನೊಮ್ಮೆ ಭೇಟಿ ನೀಡಬೇಕು.
ಹಲವಾರು ಬಾರಿ ಭೇಟಿ ನೀಡಿದಾಗಲೂ ನಿಗದಿತ ಕುಟುಂಬಗಳ ಮಾಹಿತಿ ಸಂಗ್ರಹಿಸಲು ಸಾಧ್ಯವಾಗದಿದ್ದಲ್ಲಿ ಗಣತಿದಾರರು ವಿಷಯವನ್ನು ತಮ್ಮ ಮೇಲ್ವಿಚಾರಕರ ಗಮನಕ್ಕೆ ತರಬೇಕು. ಅವರ ಆದೇಶಾನುಸಾರ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ಗಣತಿದಾರರು ಯಾವುದೇ ಕುಟುಂಬವನ್ನು ಭೇಟಿ ಮಾಡಿದಾಗ ಪ್ರಶ್ನಾವಳಿ ತುಂಬಲು ಆತುರಪಡದಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಹಸನ್ಮುಖರಾಗಿಯೇ ಭೇಟಿಯ ಬಗ್ಗೆ ಗಣತಿದಾರರು ಮಾಹಿತಿ ನೀಡುವವರಿಗೆ ಸಂಕ್ಷಿಪ್ತವಾಗಿ ತಿಳಿಸಬೇಕು.
ಇದು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಕಾರ್ಯಕ್ರಮವಾಗಿರುವುದರಿಂದ ಕುಟುಂಬಕ್ಕೆ ಸೇರದ ವ್ಯಕ್ತಿಯ ಮೂಲಕವಾಗಲಿ ಅಥವಾ ಸಂಘ ಸಂಸ್ಥೆಗಳ ಮೂಲಕವಾಗಲಿ ಮಾಹಿತಿ ಸಂಗ್ರಹಿಸದAತೆ ಗಣತಿದಾರರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಮಾಹಿತಿ ಕೊಡುವ ಪುರುಷ ಅಥವಾ ಮಹಿಳೆ ಸಾಮಾನ್ಯವಾಗಿ ತಿಳುವಳಿಕೆ ಉಳ್ಳವರಾಗಿದ್ದು, ಕುಟುಂಬದ ಬಗ್ಗೆ ಮಾಹಿತಿ ನೀಡಲು ಸಮರ್ಥರಾಗಿರಬೇಕು. ಅಪ್ರಾಪ್ತರಿಂದ ಮಾಹಿತಿ ಪಡೆಯಬಾರದು.
ಸಮೀಕ್ಷೆಯ ವೇಳೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ವಾಗ್ವಾದ ಮಾಡದೇ ವಿನಯಪೂರ್ವಕವಾಗಿಯೇ ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಬೇಕು ಎನ್ನುವುದನ್ನು ಗಣತಿದಾರರಿಗೆ ಒತ್ತಿ ಹೇಳಲಾಗಿದೆ. ಅದರಲ್ಲೂ ಮಾಹಿತಿ ನೀಡುವವರು ಮಹಿಳೆಯರಾಗಿದ್ದಲ್ಲಿ ಹೆಚ್ಚು ಗೌರವಪೂರ್ವಕವಾಗಿ ವರ್ತಿಸುವಂತೆ ಸೂಚನೆ ಕೊಡಲಾಗಿದೆ.
ಕುಟುಂಬದ ಸದಸ್ಯರು ಮಾಹಿತಿ ನೀಡುವಾಗ ತಾಳ್ಮೆಯಿಂದ ವರ್ತಿಸಿ ಅವರು ನೀಡುವ ಮಾಹಿತಿಯನ್ನು ಸರಿಯಾಗಿ ದಾಖಲು ಮಾಡಬೇಕು. ಅವರು ಉತ್ತರಿಸುವ ಮೊದಲೇ ಇನ್ನಿತರ ಅಂಶಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬಾರದು. ಸದಸ್ಯರು ನೀಡುವ ಮಾಹಿತಿಯನ್ನು ನಮೂನೆ-3 ರಲ್ಲಿ ನಮೂದಿಸಿರುವ ಅಂಶಗಳ ಬಗ್ಗೆ ಹಾಗೂ ನಿಗದಿತ ಕೋಡ್ ಸಂಖ್ಯೆಗಳ ಪ್ರಕಾರ ಮೊಬೈಲ್ ಆಪ್‌ನಲ್ಲಿ ನಮೂದಿಸಬೇಕು ಎನ್ನುವ ಸೂಚನೆಗಳನ್ನು ಗಣತಿದಾರರಿಗೆ ಕೊಡಲಾಗಿದೆ.
ಸರ್ಕಾರದ ಮಟ್ಟದಲ್ಲಿ ಮಹತ್ವದ್ದು ಅನ್ನಿಸಿಕೊಂಡಿರುವ ಈ ಸಮೀಕ್ಷೆಯ ಯಶಸ್ಸು ಸಂಪೂರ್ಣವಾಗಿ ಗಣತಿದಾರರ ಮೇಲೆ ಅವಲಂಬಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತವೂ ತೀವ್ರ ಮುತುವರ್ಜಿವಹಿಸಿರುವುದು ಕಂಡುಬAದಿದೆ.